ಮೈಸೂರು, ಏ 25 (DaijiworldNews/MS): ಮುಸ್ಲಿಮರ ಶೇ.4ರಷ್ಟು ಮೀಸಲಾತಿ ರದ್ದು ಮಾಡಿದ ಬಿಜೆಪಿ ಸರ್ಕಾರ ಅದನ್ನು ಸುಪ್ರೀಂಕೋರ್ಟ್ ಮುಂದೆ ಸಮರ್ಥಿಸಲು ವಿಫಲವಾಗಿದ್ದು, ಸರ್ಕಾರದ ಈ ಮೀಸಲಾತಿ ಬರೀ ಲಾಲಿಪಾಪ್ ಆಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಟೀಕಿಸಿದ್ದಾರೆ.
ರಣದೀಪ್ ಸಿಂಗ್ ಸರ್ಜೇವಾಲ ಹಾಗೂ ಡಿ.ಕೆ ಶಿವಕುಮಾರ್ ಅವರ ಮೈಸೂರಿನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಸರಿನಲ್ಲಿ ಸುಳ್ಳು ಹೇಳುತ್ತಿರುವ ಬಿಜೆಪಿಗೆ ಸುಪ್ರೀಂನಲ್ಲಿ ಹಿನ್ನಡೆಯಾಗಿದೆ. ಇದು ಡಬಲ್ ಇಂಜಿನ್ ದೋಖಾ. ದ್ರೋಹ ಬಗೆವ ಬಿಜೆಪಿ ಸರ್ಕಾರದ ಮೂಲ ಉದ್ದೇಶ, ಚುನಾವಣೆ ಸಮಯದಲ್ಲಿ ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಈ ಸಮುದಾಯಗಳಿಗೆ ಲಾಲಿಪಾಪ್ ಕೊಟ್ಟು ಯಾಮಾರಿಸುವ ಪ್ರಯತ್ನ ನಡೆದಿದೆ. ಅಂತಿಮವಾಗಿ ಈ ಮೀಸಲಾತಿ ಹೆಚ್ಚಳ ವಿಚಾರ ಕಾನೂನು ಕಟಕಟೆಯಲ್ಲಿ ನಿಂತು ಯಾರಿಗೂ ಮೀಸಲಾತಿ ಸಿಗಬಾರದು, ಮೀಸಲಾತಿ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುವ ಷಡ್ಯಂತ್ರ ರೂಪಿಸಿದೆ.ಲಿಂಗಾಯತ, ಒಕ್ಕಲಿಗ, SC/ST ಸಮುದಾಯಕ್ಕೂ ಮೀಸಲಾತಿ ಹೆಸರಲ್ಲಿ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳು, ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗಗಳು ಹಾಗೂ ಇತರ ಸಮುದಾಯಗಳು ಮೀಸಲಾತಿ ಹೆಚ್ಚಳ ಬೇಡಿಕೆ ಇಟ್ಟಿದ್ದು, ಇವರ ಆಶೋತ್ತರ ಈಡೇರಿಸಲು 50% ಇರುವ ಮೀಸಲಾತಿ ಮಿತಿ ವಿಸ್ತರಣೆ ಮಾಡಲು ನಿರಾಕರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ