ಹುಬ್ಬಳ್ಳಿ, ಏ 25 (DaijiworldNews/MS): ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ ಅಂಥ ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ರಾತ್ರಿ ನಡೆದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ದ್ರೋಹ ಮಾಡಿದ ಜಗದೀಶ್ ಶೆಟ್ಟರ್ ಟೀಮ್ ಗೆ ಪಾಠ ಕಲಿಸಬೇಕು. ಶೆಟ್ಟರ್ ಅವರನ್ನು ಮನೆಗೆ ಕಳಿಸಿ ಎಂದು ಕರೆ ನೀಡಿದರು. ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ವಿಧಾನಸಭೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಅದರೂ ಪಕ್ಷ ನಿಷ್ಟೆ ತೋರಲಿಲ್ಲ ಎಂದರು
"ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ, ಅವರಿಗೆ ಟಿಕೆಟ್ ಕೊಡ್ತೇವೆ ಎಂದೆವು, ಜೊತೆಗೆ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು ಯಾವುದನ್ನೂ ಸ್ವೀಕರಿಸಲಿಲ್ಲ. ಶೆಟ್ಟರ್ ಅನ್ನು ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದೇವೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಿಂತು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಅವರಿಗೆ ಏನು ಅನ್ಯಾಯ ಮಾಡಿದ್ದೆವು ಎಂದು ಪ್ರಶ್ನೆ ಮಾಡಿದ್ದಾರೆ.