ಹಾವೇರಿ, ಏ 25 (DaijiworldNews/SM) : ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಿಲ್ಲೆಯ ಬ್ಯಾತನಾಳ ಗ್ರಾಮದ ವೀರ ಯೋಧ ರವಿಕುಮಾರ ಕೆಳಗಿನಮನಿ (35) ಚಿಕಿತ್ಸೆ ಫಲಿಸದೇ ವೀರ ಮರಣ ಹೊಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಛತ್ತೀಸಗಡದಲ್ಲಿ ನಡೆದ ಬಾಂಬ್ ದಾಳಿ ವೇಳೆ ವೀರ ಯೋಧ ರವಿಕುಮಾರ ಕೆಳಗಿನಮನಿ ಗಂಭೀರವಾಗಿ ಗಾಯಗೊಂಡಿದ್ದರು.
ವೀರ ಮರಣವನ್ನಪ್ಪಿದ ಯೋಧನ ಪಾರ್ಥೀವ ಶರೀರ ಏ.26 ರಂದು ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಗ್ರಾಮದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೃತ ರವಿಕುಮಾರ ಕೆಳಗಿನಮನಿ ಸಿಆರ್ಪಿಎಫ್ ಯೋಧನಾಗಿದ್ದು, ಛತ್ತೀಸಗಡದ ನೆಲ್ಸನರ್ ಸಮೀಪದ ಪಾಂಡೆ ಮುರ್ಗಾ ಪ್ರದೇಶದಲ್ಲಿ ಕಳೆದ ಮಾರ್ಚ್ 30 ರಂದು ನಡೆದ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಯೋಧನಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಮಂಗಳವಾರ ಮೃತಪಟ್ಟಿದ್ದಾರೆ. ದೆಹಲಿಯಿಂದ ಬೆಂಗಳೂರು ಮಾರ್ಗವಾಗಿ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದೆ. ಬೆಂಗಳೂರಿನ ಸಿಆರ್ಪಿಎಫ್ ಬೆಟಾಲಿಯನ್ನಲ್ಲಿ ಗೌರವ ಸಲ್ಲಿಸಿ ಸ್ವಗ್ರಾಮಕ್ಕೆ ತರಲಾಗುತ್ತಿದೆ. ಬುಧವಾರ ಬೆಳಗ್ಗೆ ಬ್ಯಾತನಾಳ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಣ್ಣೀರಿನಲ್ಲಿ ಮೃತ ಯೋಧನ ಕುಟುಂಬಸ್ಥರು.....
ವೀರ ಯೋಧ ರವಿಕುಮಾರ ಅವರು ಕಳೆದ ಫೆ. 21ರಿಂದ 27 ದಿನಗಳ ಕಾಲ ರಜೆ ಹಾಕಿ ಊರಿಗೆ ಬಂದಿದ್ದರು. ಅವರ ಪತ್ನಿ ಅಶ್ವಿನಿ 2 ತಿಂಗಳ ಗರ್ಭಿಣಿಯಾಗಿದ್ದು, ವಯೋವೃದ್ಧ ಪೋಷಕರು ಇದ್ದಾರೆ. ಪತ್ನಿ ಮತ್ತು ಪೋಷಕರಿಗೆ ಆಘಾತವಾಗಬಾರದು ಎಂಬ ಕಾರಣಕ್ಕೆ ರವಿ ಸಾವಿನ ಸುದ್ದಿಯನ್ನು ಆರಂಭದಲ್ಲಿ ತಿಳಿಸಿರಲಿಲ್ಲ. ಬಳಿಕ ಅಕ್ಕಪಕ್ಕದವರು, ಕುಟುಂಬದವರು ಮನೆಗೆ ಆಗಮಿಸಿ ವಿಷಯ ತಿಳಿಸಿದಾಗ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಕಳೆದ ತಿಂಗಳಷ್ಟೇ ಊರಿಗೆ ಬಂದು ಹೋಗಿದ್ದವ ಶವವಾಗಿ ಮರಳಿ ಬರುತ್ತಾನೆಂದು ಯಾರೂ ಎಣಿಸಿರಲಿಲ್ಲ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕುಲುಕುವಂತಿತ್ತು.
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.