ಮಡಿಕೇರಿ, ಏ 25 (DaijiworldNews/SM) : ತಾಲೂಕಿನ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಳೆದ 30 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಕೂಡಾ ಯಾವುದೇ ಸ್ಪಂದನೆ ದೊರಕದ ಕಾರಣದಿಂದಾಗಿ ನಗರದ ನಿವಾಸಿಗಳು ಎ.27 ರಿಂದ ಅರೆಬೆತ್ತಲೆ ಪ್ರತಿಭಟನೆ ಆರಂಭಿಸಲು ನಿರ್ಧರಿಸಿದ್ದಾರೆ ಎಂದು ಹೋರಾಟಗಾರರ ಪರವಾಗಿ ಸ್ಥಳೀಯ ನಿವಾಸಿ ಎಂ.ಎಸ್.ಆನಂದ ಮಾಹಿತಿ ನೀಡಿದ್ದಾರೆ.
ಪಾಲೇಮಾಡು ಕಾನ್ಶಿರಾಂ ನಗರದಲ್ಲಿ 260 ಕುಟುಂಬಗಳು ವಾಸ ಮಾಡುತ್ತಿರುವ ನಿವೇಶನದ ಹಕ್ಕುಪತ್ರದ ಲೋಪದೋಷಗಳನ್ನು ಸರಿಪಡಿಸಬೇಕು ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಗ್ರಾಮದಲ್ಲೇ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪರಿಶಿಷ್ಟ ಜಾತಿ, ಪಂಗಡ ಮತ್ತಿತರ ದುರ್ಬಲ ವರ್ಗದವರು ಮಾಡುತ್ತಿದ್ದಾರೆ. ಸತ್ಯಾಗ್ರಹ ಸ್ಥಳಕ್ಕೆ ಖುದ್ದು ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಸ್ಥಳೀಯರ ಬೇಡಿಕೆಗಳ ಕುರಿತು ಸೂಕ್ತ ಭರವಸೆ ನೀಡಬೇಕು. ಇಲ್ಲವಾದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಆದರೆ ಬಡವರ ಹೋರಾಟಕ್ಕೆ ಬೆಲೆ ಇಲ್ಲ ಎಂಬಂತೆ ಇಲ್ಲಿಯವರೆಗೆ ಯಾರೂ ನಮ್ಮನ್ನು ವಿಚಾರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯರು, ಪುರುಷರು, ಮಕ್ಕಳೂ ಕೂಡಾ ಧರಣಿ ನಡೆಸುತ್ತಿದ್ದರೂ ಕೂಡಾ ಕನಿಷ್ಠ ಮಾನವೀಯತೆ ದೃಷ್ಟಿಯಿಂದಲೂ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಹೋರಾಟಗಾರರ ಅಸಮಾಧಾನ.
ತಿಂಗಳು ಕಳೆದರೂ ಕೂಡಾ ಹೋರಾಟಕ್ಕೆ ಸೂಕ್ತ ಸ್ಪಂದನೆ ದೊರಕದ ಕಾರಣದಿಂದಾಗಿ ಮುಂದಿನ ಭಾಗವಾಗಿ ಅರೆಬೆತ್ತಲೆ ಪ್ರತಿಭಟನೆಯನ್ನು ಆರಂಭಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿರುವುದಾಗಿ ಆನಂದ ಅವರು ಮಾಹಿತಿ ನೀಡಿದ್ದಾರೆ.