ನವದೆಹಲಿ, ಏ 24 (DaijiworldNews/MS): ಬಿಜೆಪಿ ಸಂಸದ ಹಾಗೂ ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ಪುನರಾರಂಭಿಸಿದ ಹಿನ್ನೆಲೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣದಲ್ಲಿ ಕ್ರೀಡಾ ಸಚಿವಾಲಯ ರಚಿಸಿರುವ ತನಿಖಾ ಸಮಿತಿಯಿಂದ ಪೊಲೀಸರು ವರದಿ ಕೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಭಾರತದ ಅಗ್ರ ಕುಸ್ತಿಪಟುಗಳು ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, 7 ಮಹಿಳಾ ಕುಸ್ತಿಪಟುಗಳು ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು.
ಈ ವರ್ಷದ ಜನವರಿಯಲ್ಲಿ ಖ್ಯಾತ ಕುಸ್ತಿಪಟುಗಳು ಸೇರಿದಂತೆ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಆರೋಪಗಳ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ಹಿಂಪಡೆದಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಆಗದಿರುವ ಕಾರಣ ಕುಸ್ತಿಪಟುಗಳು ಮತ್ತೆ ತಮ್ಮ ಪ್ರತಿಭಟನೆ ಪುನರಾಂಭಿಸಿದ್ದು, ತಮ್ಮ ಹೋರಾಟಕ್ಕೆ ರಾಜಕೀಯ ಪಕ್ಷಗಳ ಬೆಂಬಲವನ್ನೂ ಕೋರಿದ್ದಾರೆ.