ಲಕ್ನೋ, ಏ 24 (DaijiworldNews/HR): ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕತಿ ಖೇಡಾ ಗ್ರಾಮದಲ್ಲಿ ಮದ್ಯ ಕುಡಿಯಲು ಅಪ್ಪ ಹಣ ಕೊಡಲಿಲ್ಲವೆಂದು ಯುವಕನೊಬ್ಬ ಸಿಟ್ಟಿನಲ್ಲಿ ಹೈಟೆನ್ಷನ್ ವೈಯರ್ ವುಳ್ಳ ವಿದ್ಯುತ್ ಕಂಬಕ್ಕೇರಿ ಕುಳಿತಿರುವ ಘಟನೆ ನಡೆದಿದೆ.
ಮಗನೊಬ್ಬ ತನಗೆ ಮದ್ಯ ಕುಡಿಯಲು 1500 ರೂ. ಹಣಬೇಕೆಂದು ತನ್ನ ತಂದೆಯ ಬಳಿ ಕೇಳಿದ್ದಾನೆ. ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಾದ ಮಗ ಮನೆಯ ಪಕ್ಕದಲ್ಲಿರುವ ಹೈಟೆನ್ಷನ್ ವಿದ್ಯುತ್ ಕಂಬಕ್ಕೇರಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.
ಇನ್ನು ಯುವಕನ ವರ್ತನೆ ಕುರಿತು ಗ್ರಾಮಸ್ಥರೆಲ್ಲ ಭೀತಿಗೆ ಒಳಗಾಗಿ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಾಯ ಸಂಭವಿಸದಿರಲು ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.