ಬೆಂಗಳೂರು, ಏ 24 (DaijiworldNews/MS): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನವಾಗಿದೆ. ಇದರೊಂದಿಗೆ ಬಂಡಾಯದ ಬಾವುಟ ಹಾರಿಸಿರುವ ಅಭ್ಯರ್ಥಿಗಳ ಮನವೊಲಿಸಿ, ನಾಮಪತ್ರ ಹಿಂಪಡೆಯುವಂತೆ ಮಾಡಲು ಕೂಡಾ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಇಂದು ಅಂತಿಮ ದಿನವಾಗಿದೆ.
ರಾಜ್ಯದಲ್ಲಿ 3632 ಮಂದಿ ಚುನಾವಣೆ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 502 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ. 3130 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಬಿಜೆಪಿ ಎಲ್ಲಾ ಇನ್ನೂ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ 223 ಕ್ಷೇತ್ರಗಳಲ್ಲಿ, ಜೆಡಿಎಸ್ 211 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಕೆಲವೆಡೆ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮಾಡುವಲ್ಲಿ ಪ್ರಮುಖ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ಯಶಸ್ವಿಯಾಗಿದೆ. ಬಂಡಾಯದ ಬಾವುಟ ಹಾರಿಸಿರುವ ಅಭ್ಯರ್ಥಿಗಳು ಫಲಿತಾಂಶದ ದಿಕ್ಕು ಬದಲಿಸುವ ಆತಂಕ ಉಭಯ ಪಕ್ಷಕ್ಕೂ ಕಾಡುತ್ತಿರುವ ಕಾರಣ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಆಯಾ ಪಕ್ಷಗಳ ನಾಯಕರು ಅಖಾಡಕ್ಕಿಳಿದಿದ್ದಾರೆ.
ಅಂತಿಮವಾಗಿ ಎಷ್ಟು ಜನ ಕಣದಲ್ಲಿ ಉಳಿಯಲಿದ್ದಾರೆ ಎಂಬುವುದು ಇಂದು ಸಂಜೆಯೊಳಗೆ ಸಂಪೂರ್ಣ ಚಿತ್ರಣ ಸಿಗಲಿದೆ.