ಮಧ್ಯಪ್ರದೇಶ, ಏ 24 (DaijiworldNews/MS): ಕಳೆದ ವರ್ಷ ನಮೀಬಿಯಾದಿಂದ ತರಲಾದ 8 ಚೀತಾಗಳ ಪೈಕಿ ಮತ್ತೊಂದು ಚೀತಾ ಮೃತಪಟ್ಟಿದೆ. ಅನಾರೋಗ್ಯದಿಂದ 6 ವರ್ಷದ ಗಂಡು ಚೀತಾ ‘ಉದಯ್’ ಮೃತಪಟ್ಟಿದೆ.
ಮಧ್ಯಪ್ರದೇಶದಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ‘ಸಾಶಾ’ ಹೆಸರಿನ ಚೀತಾ ಕೆಲತಿಂಗಳ ಹಿಂದೆ ಮೃತಪಟ್ಟಿತ್ತು.ಏಪ್ರಿಲ್ 23ರ ಭಾನುವಾರ ಬೆಳಗ್ಗೆಯಿಂದ ಅಸ್ವಸ್ಥಗೊಂಡಿದ್ದ ಚೀತಾವನ್ನು ವನ್ಯಜೀವಿ ವೈದ್ಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ 4 ಗಂಟೆ ಸಮಯದಲ್ಲಿ ಚೀತಾ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಉದಯ್ ಚೀತಾ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ಮಾಹಿತಿ ನೀಡಿದ್ದಾರೆ. ಪಶುವೈದ್ಯಕೀಯ ತಂಡ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಿದೆ. ಸಂಪೂರ್ಣ ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಮತ್ತು ಛಾಯಾಗ್ರಹಣ ಮಾಡಲಾಗುತ್ತದೆ.
ಭಾರತದಲ್ಲಿ ಚೀತಾ ಸಂತತಿ ಅವಸಾನ ಕಂಡಿದ್ದವು. ದೇಶದಲ್ಲಿ ಮತ್ತೆ ಚೀತಾ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಚೀತಾಗಳನ್ನು ಮರುಪರಿಚಯಿಸುವ ಕಾರ್ಯಕ್ರಮವನ್ನು ರೂಪಿಸಿತ್ತು. ಅದರಂತೆ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್ಗೆ ಬಿಡಲಾಗಿತ್ತು