ಬೆಂಗಳೂರು, ಏ. 23 (DaijiworldNews/SM): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಈ ನಡುವೆ ರಾಜಕೀಯ ನಾಯಕರ ಪ್ರಚಾರ ಕಾರ್ಯ ಅತ್ಯಂತ ಬಿರುಸಿನಿಂದ ಕೂಡಿದೆ. ಚುನಾವಣಾ ಪ್ರಚಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ನಲ್ಲೇ ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ, ನೀತಿ ಸಂಹಿತೆಯಂತೆ ಅಭ್ಯರ್ಥಿ ಪ್ರಯಾಣದ ವಾಹನವನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಡಿಕೆಶಿ ಅವರು ಪ್ರಯಾಣಿಸಿದ ಹೆಲಿಕಾಪ್ಟರ್ ಅನ್ನು ಅಧಿಕಾರಿಗಳು ಪರಿಶೀಲನೆ ನಡೆಸಿರುವ ಬಗ್ಗೆ ಡಿಕೆಶಿ ತಮ್ಮ ಟ್ವೀಟರ್ ಖಾತೆಯ ಮೂಲಕ ಅಸಮಧಾನ ಹೊರ ಹಾಕಿದ್ದಾರೆ.
ನಿನ್ನೆ ಮತ್ತು ಇಂದು ಚುನಾವಣಾ ಆಯೋಗದ ಅಧಿಕಾರಿಗಳು ಅವರ ಹೆಲಿಕಾಪ್ಟರ್ ಅನ್ನು ಪರಿಶೀಲನೆ ನಡೆಸಿದ್ದು, ಇದು ಡಿ.ಕೆ.ಶಿವಕುಮಾರ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, 'ಚುನಾವಣಾ ಆಯೋಗದ ಅಧಿಕಾರಿಗಳು ನಿನ್ನೆ ಮತ್ತು ಇಂದು ಎರಡೂ ದಿನ ನನ್ನ ಹೆಲಿಕಾಪ್ಟರ್ಅನ್ನೇ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಪ್ರತಿದಿನ ಪರಿಶೀಲಿಸಲು ನನ್ನ ಅಭ್ಯಂತರವೇನಿಲ್ಲ. ಆದರೆ, ಕಾಲಮಿತಿಯೊಳಗೆ ಪರಿಶೀಲನೆ ಮುಗಿಸಿ ಚುನಾವಣಾ ಪ್ರಚಾರಕ್ಕೆ ಅನುವು ಮಾಡಿಕೊಡಬೇಕು' ಎಂದು ಒತ್ತಾಯಿಸಿದ್ದಾರೆ.