ಅಮೃತಸರ, ಏ. 23 (DaijiworldNews/SM): ಅಮೃತಪಾಲ್ ಸಿಂಗ್ ಬಂಧನದ ಬಳಿಕ ಕೆಲವೇ ಗಂಟೆಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿಕ್ರಿಯಿಸಿದ್ದು, ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುವವರಿಗೆ ಕಾನೂನಿನ ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಇದೇ ವೇಳೆ ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಗಾಗಿ ಒಂದು ತಿಂಗಳ ಅವಧಿಯ ಕಾರ್ಯಾಚರಣೆಯ ಸಮಯದಲ್ಲಿ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಿದ್ದಕ್ಕಾಗಿ ಮಾನ್ ಪಂಜಾಬ್ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಮಾನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದು, 35 ದಿನಗಳ ನಂತರ ಅಮೃತಪಾಲ್ ಸಿಂಗ್ ನನ್ನು ಇಂದು ಬಂಧಿಸಲಾಗಿದೆ. ಶಾಂತಿ ಮತ್ತು ಸೌಹಾರ್ದತೆ ಕದಡುವ ಮತ್ತು ದೇಶದ ಕಾನೂನನ್ನು ಉಲ್ಲಂಘಿಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮಾರ್ಚ್ 18 ರಂದು ಅಮೃತಪಾಲ್ ನನ್ನು ಬಂಧಿಸಿದ್ದರೆ, ಗುಂಡುಗಳನ್ನು ಹಾರಿಸಲಾಗುತ್ತಿತ್ತು, ನಮ್ಮ ಸರ್ಕಾರವು ಅದನ್ನು ಬಯಸುವುದಿಲ್ಲ ಎಂದಿದ್ದಾರೆ. ನಮ್ಮ ಆಡಳಿತವು ಅಮಾಯಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡುವುದಿಲ್ಲ. ನಾನು ಶನಿವಾರ ರಾತ್ರಿಯಿಡೀ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೆ, ನಿದ್ರೆ ಮಾಡಲಿಲ್ಲ . ದೇಶದ ವಿರುದ್ಧ ಪ್ರಚಾರ ಮಾಡುವ ಮೂಲಕ ತಮ್ಮ ಕುತಂತ್ರ ನಡೆಸುವ ಪಟ್ಟಭದ್ರ ಹಿತಾಸಕ್ತಿಗಳಿಂದ ಯುವಕರನ್ನು ದಾರಿ ತಪ್ಪಿಸುವುದು ನನಗೆ ಇಷ್ಟವಿಲ್ಲ ಎಂದು ಮಾನ್ ಹೇಳಿದ್ದಾರೆ. ಇನ್ನು, ಪಂಜಾಬ್ ನ ಮೋಗಾದಲ್ಲಿ ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ.