ಬೆಂಗಳೂರು, ಏ 22 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮಾತನಾಡಲು ಯಾವುದೇ ವಿಷಯ ಇಲ್ಲದಿರುವುದರಿಂದ ಅನಗತ್ಯ ಆರೋಪ ಮಾಡುತ್ತಿದ್ದು, ಯಾರ ನಾಮಪತ್ರವೂ ತಿರಸ್ಕೃತವಾಗಿಲ್ಲದಿರುವುದೇ ಆರೋಪ ಸುಳ್ಳು ಎನ್ನಲು ಸಾಕ್ಷಿ. ನಿನ್ನೆಯೇ ಎಲ್ಲಾ ಪ್ರಕ್ರಿಯೆ ಮುಗಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧು ಮಾಡಲು ಸಿಎಂ ಕಚೇರಿಯಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಯಡಿಯೂರಪ್ಪನವರನ್ನು ಮುಗಿಸುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ , 'ಸಿದ್ದರಾಮಯ್ಯನವರನ್ನು ಹೇಗೆ ಮುಗಿಸಿದ್ದಾರೆ ಎಂದು ಗೊತ್ತಿಲ್ವಾ? ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮುಗಿಸಿದರು. ಈ ಬಾರಿ ವರುಣಾದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಎನ್ನುವುದು ಜಗ್ಗತ್ತಿಗೆ ಗೊತ್ತಿಗೆ ಎಂದರು. ಈ ರೀತಿ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ' ಎಂದು ಹೇಳಿದರು.
ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ:
'ಲಿಂಗಾಯತ ಅಣೆಕಟ್ಟು ಒಡೆದು ಹರಿದು ಕಾಂಗ್ರೆಸ್ ಎಂಬ ಸಮುದ್ರ ಸೇರಲಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಉತ್ತರಿಸಿ ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ.ಮೊದಲು ಅದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ ಸಿಎಂ, 2013 ರಲ್ಲಿ ಲಿಂಗಾಯತ ಸಮುದಾಯ ವಿಭಜನೆ ಆಗಿಲ್ಲ. ಅದು ರಾಜಕೀಯ ಪಕ್ಷವಾಯಿತು ಅಷ್ಟೇ. ಲಿಂಗಾಯತ ಮತದಾರರು ಯಾವಾಗಲೂ ಪ್ರಬದ್ದರಾಗಿದ್ದಾರೆ' ಎಂದರು.
ಸವದತ್ತಿ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸರಿ ಇಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಎಲ್ಲವೂಚುನಾವಣಾ ಅಧಿಕಾರಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಯಾವುದೇ ಪಕ್ಷವೂ ಏನೂ ಮಾಡಲು ಆಗುವುದಿಲ್ಲ. ಎಲ್ಲಾ ಪ್ರಕ್ರಿಯೆಗಳ ವಿಡಿಯೋ ಚಿತ್ರೀಕರಣ ಆಗಿದೆ ಎಂದರು.