ನವದೆಹಲಿ, ಏ.21 (DaijiworldNews/SM): ಜಮ್ಮು ಮತ್ತು ಕಾಶ್ಮೀರದ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಜಮ್ಮು ಮತ್ತು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಸಿಬಿಐ ಸಮನ್ಸ್ ಜಾರಿಗೆ ಮಾಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಫೆಬ್ರವರಿ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಲವು ದಿನಗಳಲ್ಲಿ ಸಿಬಿಐ ಅವರಿಗೆ ಸಮನ್ಸ್ ನೀಡಿದೆ.
ಮಲಿಕ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಕೇಂದ್ರ ಸರ್ಕಾರದ ಅಸಮರ್ಥತೆಯ ಪರಿಣಾಮ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದಿದೆ ಎಂದು ಹೇಳಿದ್ದರು ಮತ್ತು ಇದು ಅತಿ ದೊಡ್ಡ "ಗುಪ್ತಚರ ವೈಫಲ್ಯ" ಎಂದು ಆರೋಪಿಸಿದ್ದರು.