ಬೆಂಗಳೂರು, ಏ 21 (DaijiworldNews/MS): ಕಾಂಗ್ರೆಸ್ ಪಕ್ಷದ ಎಲ್ಲಾ 223 ಅರ್ಜಿಗಳನ್ನು ಅನೂರ್ಜಿತಗೊಳಿಸುವಂತೆ ದೂರು ನೀಡಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜಕೀಯ ಚದುರಂಗದಾಟದಲ್ಲಿ ಹೊಸ ದಾಳ ಉರುಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಣವನ್ನು ಪಡೆದುಕೊಂಡು ಬಿ ಫಾರ್ಮ್ ವಿತರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿ ಫಾರ್ಮ್ ಕೊಡಲು ನಿಯೋಜಿತರಾಗಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಬಳಿ 2 ಲಕ್ಷ ಹಣ ಪಡೆದು ಬಿ ಫಾರಂ ನೀಡಿದೆ. ಈವರೆಗೂ 1,350 ಅರ್ಜಿಗಳು ಬಂದಿದ್ದು, ಡಿ.ಕೆ.ಶಿವಕುಮಾರ್ ಹೇಳಿದಂತೆ 23 ಕೋಟಿ ಹಣ ಸಂಗ್ರಹ ಆಗಿದೆ. ಹೀಗೆ ಹಣ ನೀಡಿ ಬಿ ಫಾರಂ ನೀಡುವುದು ಅಪರಾಧ. ಜನಪ್ರತಿನಿಧಿ ಕಾಯ್ದೆ 171ಡಿ ಪ್ರಕಾರ ಇದು ಅಪರಾಧವಾಗಿದೆ. 223 ಅರ್ಜಿಗಳನ್ನು ಅನೂರ್ಜಿತಗೊಳಿಸುವಂತೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.