ಬೆಂಗಳೂರು, ಏ 21 (DaijiworldNews/MS): "ಬಿಜೆಪಿ ಭ್ರಷ್ಟಾಚಾರದ ವಿರುದ್ದ ದೊಡ್ದ ಮಟ್ಟದ ಹೋರಾಟ ನಡೆಸಿರುವ ನನ್ನನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ. ಇದನ್ನು ಅರಿತೇ ನನ್ನ ಸಹೋದರ, ಸಂಸದ ಡಿ.ಕೆ. ಸುರೇಶ್ ಅವರು ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜಕೀಯದಿಂದ ನನ್ನನ್ನು ದೂರಮಾಡಲು ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಡಿ.ಕೆ. ಸುರೇಶ್ ಅವರು ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈಗಿನ ತಂತ್ರಜ್ಞಾನದಲ್ಲಿ ಯಾರು ಮಾಹಿತಿ ನೋಡುತ್ತಾರೆ, ಡೌನ್ಲೋಡ್ ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿ ಸಿಗುತ್ತದೆ. ಬಿಜೆಪಿ ಸೆಲ್ ನನ್ನ ದಾಖಲೆ ಪರಿಶೀಲಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಧಿಕಾರಿಗಳ ದುರ್ಬಳಕೆಗೆ ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ನಾವು ಜಾಗರೂಕವಾಗಿ ಹೆಜ್ಜೆ ಇಟ್ಟಿದ್ದೇವೆ. ನನಗೆ ಅರ್ಜಿ ಹೇಗೆ ತುಂಬಬೇಕು ಗೊತ್ತಿದೆ. ನನ್ನ ದಾಖಲೆಗಳು ಸರಿಯಾಗಿವೆ. ನನ್ನ ಅರ್ಜಿ ಸ್ವೀಕೃತವಾಗಿಗಲಿದೆ ಎಂಬ ನಂಬಿಕೆ ಇದೆ. ಆದರೆ ಬಿಜೆಪಿಯವರ ಷಡ್ಯಂತ್ರ ಏನುಬೇಕಾದರೂ ಆಗಬಹುದು. ಕಳೆದ ಬಾರಿಯೇ ನನ್ನ ಅರ್ಜಿ ತರಸ್ಕರಿಸಲು ಮುಂದಾಗಿದ್ದರು. ಆದರೆ ನಾನು ಐಟಿ ಅಧಿಕಾರಿಗಳ ಮುಂದೆ ಹೋಗಿ ಎಲ್ಲ ಮಾಹಿತಿ ನೀಡಿದೆ. ಅವರು ನನಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿವೆ. ಕಳೆದ 15 ವರ್ಷಗಳಲ್ಲಿ ನಾನು ಒಂದು ಮನೆ ಬಿಟ್ಟರೆ ಉಳಿದಂತೆ ಯಾವುದೇ ಆಸ್ತಿ ಖರೀದಿ ಮಾಡಿಲ್ಲ.
ಯಡಿಯೂರಪ್ಪ ಅವರ ಸರ್ಕಾರ ಬೇರೆಯವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ನೀಡದೇ, ಕೇವಲ ನನ್ನ ಪ್ರಕರಣ ಮಾತ್ರ ನೀಡಿದ್ದಾರೆ. ಅಡ್ವಕೇಟ್ ಜೆನರಲ್ ಇದು ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಹೇಳಿದ್ದರೂ ದೆಹಲಿಯವರ ಒತ್ತಡದಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆ. ರಾಜಕೀಯದಿಂದಲೇ ನನ್ನನ್ನು ತೆಗೆದುಹಾಕಲು ಷಡ್ಯಂತ್ರ ರೂಪಿಸಿದ್ದಾರೆ.
7 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿರುವ ರಾಹುಲ್ ಗಾಂಧಿ ಅವರನ್ನು ಒಂದು ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಿ ಕೇವಲ 22 ದಿನಗಳಲ್ಲಿ ವಿಚಾರಣೆ ಮಾಡಿ ಅವರಿಗೆ ಇದುವರೆಗೂ ಯಾರಿಗೂ ನೀಡದ ಶಿಕ್ಷೆ ಪ್ರಕಟಿಸಿ, 24 ಗಂಟೆಗಳಲ್ಲಿ ಅವರ ಸಂಸತ್ ಸದಸ್ಯತ್ವ ರದ್ದು ಮಾಡಿ, ಅವರ ಮನೆ ಖಾಲಿ ಮಾಡಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ್ದು, ಅವರಿಂದ ಮನೆ ಕಿತ್ತುಕೊಂಡಿದ್ದಕ್ಕೆ ಅವರು ಬೇಸರವಾಗುವುದಿಲ್ಲ. ಅವರಿಗೆ ಸಣ್ಣ ಕೊಠಡಿ ಇದ್ದರೂ ಸಾಕು. ಭಾರತ ಜೋಡೋ ಯಾತ್ರೆ ಸಮಯದಲ್ಲಿ ಅವರು ಕೇವಲ ವ್ಯಾನ್ ನಲ್ಲಿ ಮಲಗಿ 6 ತಿಂಗಳ ಕಾಲ ಪಾದಯಾತ್ರೆ ಮಾಡಿದ್ದಾರೆ. ಸರಳತೆಯಲ್ಲಿ ಬದುಕುತ್ತಿದ್ದಾರೆ. ಸೋನಿಯಾ ಗಾಂಧಿ ಅವರು ಯಾವುದೇ ಅಕ್ರಮ ಮಾಡದಿದ್ದರೂ ಯಂಗ್ ಇಂಡಿಯಾ ಸೇರಿದಂತೆ ಅನೇಕ ಪ್ರಕರಣ ದಾಖಲಿಸಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಅವರನ್ನೇ ಬಿಟ್ಟಿಲ್ಲ ನನ್ನನ್ನು ಬಿಡುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.
ನಾಮಪತ್ರ ತಿರಸ್ಕೃತ ಆಗುವ ಭಯವಿದೆಯೇ ಎಂಬ ಪ್ರಶ್ನೆಗೆ, ‘ನಾಮಪತ್ರ ತಿರಸ್ಕರಿಸುವ ಷಡ್ಯಂತ್ರ, ಕುತಂತ್ರ ನಡೆಯುತ್ತಿದೆ. ಅವರು ಏನಾದರೂ ಮಾಡಲಿ, ನನ್ನನ್ನು ಬಂಡೆ ಎಂದು ನೀವೆಲ್ಲರೂ ಹೇಳಿದ್ದೀರಿ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ’ ಎಂದಿದ್ದಾರೆ.
ಕಾಂಗ್ರೆಸ್ ನಲ್ಲಿ ಲಿಂಗಾಯತ ಸಿಎಂ ಮಾಡಲಿ ಎಂಬ ವಿಚಾರವಾಗಿ ಸೋಮಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ನನಗೆ ಸೋಮಣ್ಣ, ಬೊಮ್ಮಾಯಿ ಅವರ ಹಿತವಚನ ಬೇಡ. ಬಸವಣ್ಣನವರ ತತ್ವವೇ ಕಾಂಗ್ರೆಸ್ ತತ್ವ. ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಮಾಡುತ್ತಿದ್ದೇವೆ. ಮೊದಲು ಬಿಜೆಪಿ ಅವರು ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎಂದರು, ಈಗ ಮೋದಿ ಅವರ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಅವರು ಏದರೂ ಮಾಡಿಕೊಳ್ಳಲಿ. ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅವರು ಸಿಕ್ಕ ಕಡೆಗಳಲ್ಲಿ ಹಸ್ತಲಾಘವ ಮಾಡಿ ಅವರಿಗೆ ಬೀಳ್ಕೊಡುಗೆ ನೀಡಿ’ ಎಂದು ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪ ಅವರ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ಹಾಗೂ ಲಿಂಗಾಯತ ಸಿಎಂ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಆಣೆಕಟ್ಟು ಹೊಡೆದ ನಂತರ ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದನ್ನು ಹೊಸದಾಗಿ ಕಟ್ಟಬೇಕು. ಈ ನೀರು ಸಮುದ್ರ ಸೇರಬೇಕು. ಈ ಕಾಂಗ್ರೆಸ್ ಸಮುದ್ರಕ್ಕೆ ಎಲ್ಲರೂ ಬಂದು ಸೇರಬೇಕು’ ಎಂದು ಹೇಳಿದ್ದಾರೆ.