ಶಿವಮೊಗ್ಗ, ಏ 21 (DaijiworldNews/MS): ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿ ನಿಮ್ಮ ಜತೆ ನಾನಿದ್ದೇನೆ ಎಂಬ ಭರವಸೆ ನೀಡಿದ್ದಾರೆ. ಮುಂಜಾನೆಯೇ ಬಂದ ಪ್ರಧಾನಿ ಕರೆ, ಮಾತನಾಡಿದ ರೀತಿಯಿಂದ ಈಶ್ವರಪ್ಪ ಅವರ ಕುಟುಂಬ ಫುಲ್ ಖುಷ್ ಆಗಿದೆ.
ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್. ಈಶ್ವರಪ್ಪ ಅವರನ್ನು ಇತ್ತೀಚೆಗೆ ರಾಜಕೀಯ ನಿವೃತ್ತಿ ಪಡೆದು ಯುವಕರಿಗೆ ಅವಕಾಶ ನೀಡಬೇಕು ಎಂದು ಹೈಕಮಾಂಡ್ ಮನವಿ ಮಾಡಲಾಗಿತ್ತು. ಅದೇ ಪ್ರಕಾರ ಈಶ್ವರಪ್ಪನವರು ನಡೆದುಕೊಂಡಿದ್ದರು.
ಪಕ್ಷದ ಸೂಚನೆಯಂತೆ ಶಿಸ್ತು ಪಾಲನೆ ಮಾಡಿದ್ದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದ್ದು, ರಾಜ್ಯಕ್ಕೆ ಬಂದ ಸಮಯದಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಸಿಗುವ ಬಗ್ಗೆ ನಿರೀಕ್ಷೆಯಿತ್ತು. ಆದರೆ ಅಂತಿಮವಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಿತ್ತು. ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಿದ್ದನ್ನು ಈಶ್ವರಪ್ಪ ಖುಷಿಯಿಂದ ಸ್ವೀಕರಿಸಿದ್ದು, ಪುತ್ರ ಕಾಂತೇಶ್ ನೊಂದಿಗೆ ಚನ್ನಬಸಪ್ಪ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲೂ ಭಾಗವಹಿಸಿದ್ದರು.