ನವದೆಹಲಿ, ಏ 21 (DaijiworldNews/MS): ಚಿತ್ರತಾರೆಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಮತ್ತು ಪತ್ರಕರ್ತರ ಹೀಗೆ ಖ್ಯಾತನಾಮರ ಅಧಿಕೃತ ಟ್ವಿಟರ್ ಖಾತೆಗಳಿಂದ ‘ಬ್ಲೂ ಟಿಕ್’ ಗುರುತನ್ನು ತೆಗೆದುಹಾಕುವ ಕಾರ್ಯವನ್ನು ಟ್ವಿಟರ್ ಗುರುವಾರದಿಂದ ಆರಂಭಿಸಿದೆ. ಹೀಗಾಗಿ ಭಾರತದ ಹಲವು ಸೆಲೆಬ್ರಿಟಿಗಳು ತಮ್ಮ ಟ್ವಿಟರ್ ಖಾತೆಯಲ್ಲಿದ್ದ ‘ಬ್ಲೂ ಟಿಕ್’ ಗುರುತನ್ನು ಕಳೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಇನ್ನೂ ಹಲವು ರಾಜಕೀಯ ನಾಯಕರ, ಸಿನಿಮಾ ತಾರೆಯರಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಅಲಿಯಾ ಭಟ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಸೇರಿ ಅನೇಕಾನೇಕರ ಟ್ವಿಟರ್ ಅಕೌಂಟ್ಗಿದ್ದ ವೆರಿಫಿಕೇಶನ್ ಮಾರ್ಕ್ ಆದ ಬ್ಲ್ಯೂಟಿಕ್ನ್ನು ತೆಗೆದುಹಾಕಲಾಗಿದೆ. ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದ ವಿವಿಧ ದೇಶಗಳ ಇನ್ನೂ ಹಲವು ಗಣ್ಯರ ಟ್ವಿಟರ್ ಅಕೌಂಟ್ ಕೂಡ ಬ್ಲ್ಯೂಟಿಕ್ನ್ನು ಕಳೆದುಕೊಂಡಿದೆ.
ಈ ಹಿಂದೆ ಹಲವು ಮಾನದಂಡಗಳನ್ನು ಅನುಸರಿಸಿ, ಅಧಿಕೃತವಾದ ಮತ್ತು ಪರಿಶೀಲನೆಗೆ (ವೆರಿಫೈಡ್) ಒಳಪಟ್ಟ ಟ್ವಿಟರ್ ಖಾತೆಗಳಿಗೆ ಮಾತ್ರ ಈ ಹಿಂದೆ ಬ್ಲೂಟಿಕ್ ನೀಡಲಾಗುತ್ತಿತ್ತು. ಆದರೆ ಎಲಾನ್ ಮಸ್ಕ್ ಸಿಇಒ ಆದ ಮೇಲೆ ಟ್ವಿಟರ್ನಲ್ಲಿ ಹಲವು ಬದಲಾವಣೆಗಳು ಆಗಿವೆ. ಈಗ ಬ್ಲೂಟಿಕ್ ಹೊಂದಿರುವ ಖಾತೆದಾರರು ತಮ್ಮ ‘ವೆರಿಫೈಡ್’ ಸ್ಥಾನಮಾನ ಉಳಿಸಿಕೊಳ್ಳಬೇಕಿದ್ದರೆ ತಿಂಗಳಿಗೆ 8 ಡಾಲರ್ (₹657.24) ನೀಡಬೇಕಾಗುತ್ತದೆ. ಇತರರಿಗೂ ಯಾರಿಗಾದರೂ ಬ್ಲ್ಯೂಟಿಕ್ ಪಡೆಯಬೇಕು ಎಂದರೂ ವರ್ಷಕ್ಕೆ/ತಿಂಗಳಿಗೆ ಎಂದು ಇಂತಿಷ್ಟು ಹಣ ಪಾವತಿಸಿ, ಚಂದಾದಾರರು ಆಗಬೇಕು.