ಕನಕಪುರ, ಏ 21 (DaijiworldNews/MS): ಚುನಾವಣ ಅಖಾಡಲ್ಲಿ ರೋಚಕ ತಿರುವು ಎಂಬಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರ ದಿಂದಲೇ ತಮ್ಮ ಡಿ.ಕೆ. ಸುರೇಶ್ ಉಮೇದುವಾರಿಕೆ ಸಲ್ಲಿಸಿ ಸ್ಪರ್ಧಾಕಣದಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
ಒಂದೆಡೆ ಡಿ.ಕೆ.ಶಿ ಅವರನ್ನು ಕನಕಪುರ ಕ್ಷೇತ್ರದಲ್ಲಿಯೇ ಅವರನ್ನು ಕಟ್ಟಿ ಹಾಕುವ ಉದ್ದೇಶಕ್ಕೆ ಬಿಜೆಪಿ ನಾಯಕರು ಕಂದಾಯ ಸಚಿವ ಆರ್. ಅಶೋಕ ಅವರನ್ನು ಕಣಕ್ಕೆ ಇಳಿಸಿದ್ದಾರೆ.
ಕನಕಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಕುಮಾರ್ ಇದೇ 17ರಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ನಾಮಪತ್ರವನ್ನು ಅಸಿಂಧುಗೊಳಿಸಲು ಬಿಜೆಪಿ ಕುತಂತ್ರ ನಡೆಸಿದೆ ಎಂದು ಆರೋಪಿಸಿರುವ ಸುರೇಶ್ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. ಬಿಜೆಪಿ ಕುತಂತ್ರದಿಂದ ನಾಮಪತ್ರ ತಿರಸ್ಕೃತಗೊಳ್ಳಬಹುದು ಎಂಬ ಭೀತಿಯಿಂದ ತಮ್ಮ ಭದ್ರಕೋಟೆಯಲ್ಲೇ ಪ್ಲ್ಯಾನ್ ಬಿ ರೂಪವಾಗಿ ತಮ್ಮ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನೊಂದೆಡೆ ಶಿವಕುಮಾರ್ಗೆ ಐ.ಟಿ. ಮತ್ತು ಇ.ಡಿ. ವಾರದ ಹಿಂದಷ್ಟೇ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಚುನಾವಣೆ ಸಂದರ್ಭದಲ್ಲಿ ಶಿವಕುಮಾರ್ ಅವರನ್ನು ಬಂಧಿಸಬಹುದು ಎನ್ನುವ ಆತಂಕವೂ ಕಾಂಗ್ರೆಸ್ಗೆ ಕಾಡುತ್ತಿದೆ ಇದು ಕೂಡಾ ಸಮಸ್ಯೆಗೆ ಕಾರಣವಾಗಬಹುದು ಎಂದು ಮುನ್ನೆಚ್ಚರಿಕೆಯಿಂದ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.