ಬೆಂಗಳೂರು, ಏ.20 (DaijiworldNews/SM): ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಶ್ರೀ ಮತ್ತು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣ ರದ್ದುಗೊಂಡಿದೆ.
ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಸಂತ್ರಸ್ತೆ ವಿರುದ್ಧ ಹೇಳಿಕೆ ನೀಡುವಂತೆ ಒತ್ತಡ ಹಿನ್ನೆಲೆ 2014ರ ಸೆ.1ರಂದು ಪುತ್ತೂರಿನ ಕೆದಿಲ ಗ್ರಾಮದಲ್ಲಿ ಶಾಸ್ತ್ರಿ ಅವರು ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಆರೋಪಪಟ್ಟಿ ದಾಖಲಿಸಿದ್ದರು. ಸದ್ಯ ನ್ಯಾ. ಹೇಮಂತ ಚಂದನಗೌಡರ್ರಿದ್ದ ಹೈಕೋರ್ಟ್ ಪೀಠ, ಶ್ರೀಗಳ ಮತ್ತು ಕಲ್ಲಡ್ಕ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.
ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಶ್ಯಾಮ್ ಪ್ರಸಾದ್ ಶಾಸ್ತ್ರಿ ಪ್ರಮುಖ ಸಾಕ್ಷಿಯಾಗಿದ್ದರು. ಶ್ಯಾಮ್ ಪ್ರಸಾದ್ ಶಾಸ್ತ್ರಿ ಸಂತ್ರಸ್ತೆ ಮಹಿಳೆಯ ಮೈದುನ. ಆದರೆ, 2014, ಆಗಸ್ಟ್ 31ರಂದು ಇವರು ತಮ್ಮ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಶಾಸ್ತ್ರಿ ಪತ್ನಿ ಸಂಧ್ಯಾಲಕ್ಷ್ಮೀ ಅವರು ಮೂವರ ವಿರುದ್ಧ ದೂರು ದಾಖಲಿಸಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನದಂದು ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಬೋಳಂತಾಯ ಶಿವಶಂಕರ್ ಭಟ್ ಅವರು ತಮ್ಮ ಪತಿಗೆ ಕರೆ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ರಾಘವೇಶ್ವರ ಶ್ರೀಗಳ ಪರವಾಗಿ ಸಾಕ್ಷಿ ಹೇಳಬೇಕು. ರಾಮಚಂದ್ರಾಪುರ ಮಠಕ್ಕೆ ಹೋಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅಣ್ಣ-ಅತ್ತಿಗೆ ಮಾಡಿದ್ದು ತಪ್ಪು ಎಂದು ಒಪ್ಪಿ ಲಿಖಿತವಾಗಿ ಬರೆದುಕೊಡಬೇಕು ಎಂದು ತಮ್ಮ ಪತಿಗೆ ಬೆದರಿಕೆ ಹಾಕಿದ್ದಾಗಿ ಸಂಧ್ಯಾಲಕ್ಷ್ಮೀ ಆರೋಪಿಸಿದ್ದರು.