ಸೂರತ್, ಏ 20 (DaijiworldNews/MS): 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರ್ಜಿಯ ವಿಚಾರಣೆ ನಡೆಸಿದ ಸೂರತ್ನ ಸೆಷನ್ಸ್ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಬಿನ್ ಮೊಗೇರ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದರು. ಇದರರ್ಥ ಗಾಂಧಿಯವರ ಲೋಕಸಭೆಯ ಅನರ್ಹತೆಯು ಮುಂದುವರಿಯಲಿದೆ.
ಏಪ್ರಿಲ್ 13, 2019, ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕ ಮತ್ತು ಆಗಿನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೋಲಾರದಲ್ಲಿ ಆಯೋಜನೆಯಾಗಿದ್ದ ಬಹಿರಂಗ ಸಭೆಯಲ್ಲಿ ಅಬ್ಬರದ ಭಾಷಣ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶದಲ್ಲಿ ಎಲ್ಲಾ ಕಳ್ಳರೂ ಮೋದಿ ಎಂಬ ಉಪನಾಮವನ್ನೇ ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿ ಗುಜರಾತ್ನ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪೂರ್ಣೇಶ್ ಮೋದಿ ಸೂರತ್ನಲ್ಲಿ ದೂರು ನೀಡಿದ್ದರು.
ವಯನಾಡ್ ನ ಲೋಕಸಭಾ ಸಂಸದರಾದ ರಾಹುಲ್ ಗಾಂಧಿ ಅವರನ್ನು ಸೂರತ್ ನ ಕೆಳ ನ್ಯಾಯಾಲಯವು ಮಾರ್ಚ್ 23 ರಂದು ಸೆಕ್ಷನ್ 499 ಮತ್ತು 500 (ಮಾನನಷ್ಟ) ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅನರ್ಹಗೊಳಿಸಲಾಗಿತ್ತು. ತೀರ್ಪು ಹೊರಬಿದ್ದ ಕೂಡಲೇ ರಾಹುಲ್ ಗಾಂಧಿಯವರ ಜಾಮೀನಿನ ಅರ್ಜಿಯ ವಿಚಾರಣೆಯೂ ನಡೆದು ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು ಅಲ್ಲದೆ, ನ್ಯಾಯಾಲಯದ ತೀರ್ಪಿನ ವಿರುದ್ಧ ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು.