ಹಾವೇರಿ, ಏ 19 (DaijiworldNews/MS): ನನ್ನನ್ನು ಬೆಳಸಿದವರು ನೀವು. ನನ್ನನ್ನು ಉಳಿಸಿಕೊಳ್ಳುವವರು ನೀವು. ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಮಾಡುತ್ತೇನೆ. ನನ್ನ ಸಾವಾದರೆ, ನನ್ನನ್ನು ಶಿಗ್ಗಾವಿಯಲ್ಲೇ ಮಣ್ಣು ಮಾಡಬೇಕು. ಇದು ನನ್ನ ಶಿಗ್ಗಾವಿಯ ಭೂಮಿ ತಾಯಿಯ ಮಣ್ಣಿನ ಋಣ ತೀರಿಸುವಂತದ್ದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಅದ್ಯಾವ ಜನ್ಮದ ಸಂಬಂಧವೊ ಯಾವ ಋಣಾನುಬಂಧವೊ ನೀವು ಹದಿನೈದು ವರ್ಷ ಸತತ ಬೆಂಬಲ ನೀಡಿದ್ದೀರಿ, ನಮ್ಮ ನಿಮ್ಮ ನಡುವೆ ಯಾವುದೇ ಶಕ್ತಿ ಅಡ್ಡಿ ಬರುವುದಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ತಲೆ ಬಾಗಿ, ನನ್ನ ಕೊನೆ ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂಬ ಪ್ರತಿಜ್ಞೆ ಮಾಡುತ್ತೇನೆ ಎಂದರು.
ಜೆ.ಪಿ ನಡ್ಡಾ ಅವರ ನೇತೃತ್ವದಲ್ಲಿ ಪಕ್ಷ ಕರ್ನಾಟಕದಲ್ಲಿ ಅತ್ಯಂತ ಸಂಘಟಿತವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 125 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆದು, ಮತ್ತೊಮ್ಮೆ ಕನ್ನಡ ನಾಡಿನ ಸೇವೆಯನ್ನು ಮಾಡಲು ಬಾರತೀಯ ಜನತಾ ಪಕ್ಷಕ್ಕೆ ಜನರು ಆಶೀರ್ವಾದ ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ನಾನು ರೈತರಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ಏನೆಲ್ಲ ಕೆಲಸ ಮಾಡಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದರು.
ನಾನು ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುತ್ತೇನೆ ಎಂದು ಕೇಳಿದರು. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ನೀವೇ ನನ್ನ ಮಾಲೀಕರು, ನಾನು ಕ್ಷೇತ್ರ ಬಿಟ್ಟು ದಾವಣಗೆರೆಗೆ ಹೋಗುತ್ತೆನೆ. ಎಂದು ಹಬ್ಬಿಸಿದ್ದರು. ಯಾವ ನನ್ನ ಮಗ ಹೇಳಿದ್ದು ಎಂದು ಕೇಳಿದೆ. ಇದು ನನ್ನ ಆತ್ಮಸ್ಥೈರ್ಯ. ಕರ್ನಾಟಕ ಮಾತೆಗೆ, ಕನ್ನಡಿಗರಿಗೆ ಮತ್ತು ಈ ಕ್ಷೇತ್ರದ ಜನರಿಗೆ ನಾನು ಪ್ರಾಮಾಣಿಕ ಸೇವೆಯನ್ನು ಮಾಡಿದ್ದೇನೆ. ಅದರಲ್ಲಿ ನನ್ನ ನಂಬಿಕೆಯಿದೆ ಎಂದರು.
ಕ್ಷೇತ್ರದಲ್ಲಿ ಆರ್ಯುವೇದಿಕ ಆಸ್ಪತ್ರೆ, ಶಿಗ್ಗಾವಿ, ಸವಣೂರಿನಲ್ಲಿ 250 ಹಾಸಿಗೆಯ ಆಸ್ಪತ್ರೆ, ಜಿಟಿಟಿಸಿ ಮತ್ತು ಇಂಜಿನಿಯರಿಂಗ್ ಕಾಲೇಜು, 10 ಸಾವಿರ ಜನರಿಗೆ ಉದ್ಯೋಗ ಕೊಡುವ ಟೆಕ್ಸ್ಟೈಲ್ ಪಾರ್ಕ್ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಿದ್ದೇನೆ. ಬಂಕಾಪುರ ತಾಲೂಕು ಆಗಬೇಕೆಂದು ಜನರ ಬೇಡಿಕೆ ಇದೆ. ನಾನು ಇವತ್ತು ಅದಕ್ಕೆ ಎಲ್ಲ ಅನುಮತಿ ಕೊಟ್ಟು ಆಜ್ಞೆ ಮಾಡಿದ್ದೇನೆ. ಚುನಾವಣೆ ನೀತಿ ಸಂಹಿತೆ ಅದಕ್ಕೆ ಅಡಚಣೆಯಾಗಿದೆ. ಬರುವ ದಿನಗಳಲ್ಲಿ ಬಂಕಾಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಸಿ.ಸಿ ಪಾಟೀಲ, ಮುರುಗೇಶ ನಿರಾಣಿ, ಬಿ.ಸಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.