ಬೆಂಗಳೂರು, ಏ 19 (DaijiworldNews/MS):ಮಾಜಿ ಸಿಎಂ ಸಿದ್ದರಾಮಯ್ಯನವರ ಮೊಮ್ಮಗ ಇದೀಗ ರಾಜಕೀಯಕ್ಕೆ ಎಂಟ್ರಿಯಾಗಲು ಅಣಿಯಾಗುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ತಮ್ಮ ತಾತನ ಪರ ಪ್ರಚಾರ ನಡೆಸಿರುವ ದಿವಂಗತ ರಾಕೇಶ್ ಪುತ್ರ ಧವನ್ ಈ ಬಗ್ಗೆ ಮಾತನಾಡಿದ್ದಾರೆ. 'ನನ್ನ ತಂದೆಗೆ ರಾಜಕೀಯದಲ್ಲಿರಲು ತುಂಬಾ ಆಸೆಯಿತ್ತು. ನಾನು ಅವರ ಕನಸನ್ನು ನನಸು ಮಾಡುತ್ತೇನೆ. ನನಗೂ ರಾಜಕೀಯದಲ್ಲಿ ತುಂಬಾ ಆಸಕ್ತಿಯಿದೆ. ಈಗ ಸೆಕೆಂಡ್ ಪಿಯುಸಿ ಓದುತ್ತಿದ್ದೇನೆ. ಮುಂದೆ ತಾತ ಸಿದ್ದರಾಮಯ್ಯನ ರೀತಿ ಕಾನೂನು ಪದವಿ ಮಾಡಿ ರಾಜಕೀಯಕ್ಕೆ ಬರ್ತೀನಿ' ಎಂದಿದ್ದಾರೆ.
ಮೊಮ್ಮಗನ ರಾಜಕೀಯ ಇಚ್ಛೆಯ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, "ಮೊಮ್ಮಗ ರಾಜಕೀಯ ಆಸಕ್ತಿ ತೋರಿಸೋದು ಸಹಜವಾಗಿಯೇ ಖುಷಿ ಆಗುತ್ತದೆ. ಇಡೀ ಚಾಮುಂಡೇಶ್ವರಿ, ವರುಣಾ ಕ್ಷೇತ್ರವನ್ನು ಅವರಪ್ಪ ರಾಕೇಶ್ ನಿರ್ವಹಿಸುತ್ತಿದ್ದ, ಮಾತ್ರವಲ್ಲದೇ ನನ್ನ ಅನುಪಸ್ಥಿತಿಯಲ್ಲಿ ರಾಕೇಶ್ ಇಡೀ ಜಿಲ್ಲೆಯನ್ನು ನೋಡಿಕೊಳ್ಳುತ್ತಿದ್ದ, ಅಪ್ಪನ ರಕ್ತ ಅಲ್ವಾ? ಮೊಮ್ಮಗನಿಗೂ ರಾಜಕೀಯದ ಬಗ್ಗೆ ಆಸಕ್ತಿ ಬಂದಿದೆ" ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಸಂದರ್ಭದಲ್ಲಿ ಅವನಾಗಿಯೇ ಇಷ್ಟಪಟ್ಟು ನನ್ನೊಂದಿಗೆ ಮೈಸೂರಿಗೆ ಬಂದಿದ್ದಾನೆ. ವರುಣಾ ಪ್ರಚಾರಕ್ಕೆ ಹೋಗು ಅಂತ ನಾನು ಹೇಳಲ್ಲ. ನಮ್ಮ ಮನೆಯ ಯಾರನ್ನೂ ನಾನು ಪ್ರಚಾರಕ್ಕೆ ಕರೆಯುವುದಿಲ್ಲ. ಅವರಾಗಿಯೇ ಬಂದು ಪ್ರಚಾರ ಮಾಡಿದರೆ ಮಾಡಲಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ 2016 ಜುಲೈ 30 ರಂದು ಮೃತಪಟ್ಟಿದ್ದರು. ರಾಕೇಶ್ ಅವರ ಮಗ ಧವನ್ 17 ವರ್ಷಗಳಾಗಿದ್ದು ಬೆಲ್ಜಯಂನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈತನಿಗೆ ಚಿಕ್ಕಪ್ಪ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾರ್ಗದರ್ಶಿಯಾಗಿದ್ದಾರೆ.