ತಿರುವನಂತಪುರ, ಏ 19 (DaijiworldNews/MS): ತಿರುವನಂತಪುರ ಮತ್ತು ಕಣ್ಣೂರು ನಡುವೆ ಸಂಚರಿಸಲಿರುವ ಕೇರಳದ ಮೊದಲ ವಂದೇ ಭಾರತ್ ರೈಲನ್ನು ಗಡಿಭಾಗದ ಕಾಸರಗೋಡಿಗೆ ವಿಸ್ತರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ. ಈ ಮುನ್ನ ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಅನ್ನು ಕೇವಲ ಕಣ್ಣೂರಿನವರೆಗೆ ಮಾತ್ರವೇ ಓಡಿಸಲು ನಿರ್ಧರಿಸಲಾಗಿತ್ತು.
ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಏ.25ರಂದು ಚಾಲನೆ ನೀಡಲಿದ್ದು, ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಮನವಿಯನ್ನು ಪುರಸ್ಕರಿಸಿ ಈ ರೈಲು ಸಂಚಾರವನ್ನು ಕಾಸರಗೋಡಿಗೂ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವಂದೇ ಭಾರತ್ ರೈಲಿನ ಸುಗಮ ಸಂಚಾರಕ್ಕಾಗಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ರೈಲ್ವೇ ಮಾರ್ಗವನ್ನು 2 ಹಂತಗಳಲ್ಲಿ ಮೇಲ್ದರ್ಜೆಗೇರಿಸಲಿದೆ. ಒಂದೂವರೆ ವರ್ಷದೊಳಗೆ ಮೊದಲ ಹಂತ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಮಾರ್ಗದಲ್ಲಿ ರೈಲು ವೇಗವನ್ನುಹೆಚ್ಚಿಸಲು 381 ಕೋಟಿ ರು. ಬಿಡುಗಡೆ ಮಾಡಲಾಗಿದೆ. 2ನೇ ಹಂತದಲ್ಲಿ ಅತಿ ಹೆಚ್ಚು ತಿರುವುಗಳನ್ನು ನೇರಗೊಳಿಸಲು ಮತ್ತು ಅಗತ್ಯವಿರುವೆಡೆ ಹೊಂದಾಣಿಕೆಗಳನ್ನು ನಡೆಸಲಾಗುವುದು. ಇದಕ್ಕಾಗಿ ಮೂರುವರೆ ವರ್ಷ ಸಮಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.