ಲಖನೌ, ಏ 18 (DaijiworldNews/SM): 2017ರ ಮೊದಲು ಯುಪಿ ಗಲಭೆಗಳಿಗೆ ಹೆಸರುವಾಸಿಯಾಗಿತ್ತು. ಆದರೆ ಇದೀಗ ಗಲಭೆ ರಾಜ್ಯ ಎಂಬ ಕಳಂಕವನ್ನು ನಾವು ಹೋಗಲಾಡಿಸಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬರುವ ಮುನ್ನ ದಿನಕ್ಕೊಂದು ಗಲಾಟೆ ನಡೆಯುತ್ತಿತ್ತು. 2012ರಿಂದ 17ರ ನಡುವೆ 700ಕ್ಕೂ ಹೆಚ್ಚು ಗಲಭೆಗಳು ನಡೆದಿವೆ. 2017ರ ನಂತರ ಗಲಭೆಗಳಿಗೆ ಅವಕಾಶವೇ ನೀಡಿಲ್ಲ. ಈ ಹಿಂದೆ ಗ್ಯಾಂಗ್ ಸ್ಟರ್ ಗಳು ಯುಪಿಗೆ ಅಪಾಯಕಾರಿಯಾಗಿದ್ದರು. ಆದರೆ ಈಗ ಗ್ಯಾಂಗ್ ಸ್ಟಾರ್’ಗಳಿಗೆ ಉತ್ತರ ಪ್ರದೇಶ ಅಪಾಯಕರವಾಗಿ ಬದಲಾಗಿದೆ ಎಂದು ಗುಡುಗಿದ್ದಾರೆ. ಇಂದು ಯಾವುದೇ ಅಪರಾಧಿಗಳು ಉದ್ಯಮಿಗೆ ಬೆದರಿಕೆ ಹಾಕುವ ಸಾಹಸ ಮಾಡುತ್ತಿಲ್ಲ. ಉತ್ತರ ಪ್ರದೇಶ ಸರ್ಕಾರವು ನಿಮ್ಮ ಎಲ್ಲಾ ಹೂಡಿಕೆದಾರರ ಬಂಡವಾಳವನ್ನು ಸುರಕ್ಷಿತವಾಗಿಡಲು ಸಮರ್ಥವಾಗಿದೆ ಎಂದರು.
ಈ ಹಿಂದೆ ಎಲ್ಲಿ ಕತ್ತಲು ಶುರುವಾಗುತ್ತದೆಯೋ ಅಲ್ಲಿಂದ ಉತ್ತರ ಪ್ರದೇಶ ಆರಂಭವಾಗುತ್ತದೆ ಎಂದು ಹೇಳಲಾಗುತ್ತಿತ್ತು. 75 ಜಿಲ್ಲೆಗಳ ಪೈಕಿ 71 ಜಿಲ್ಲೆಗಳು ಕತ್ತಲೆಯಲ್ಲಿದ್ದವು. ಇಂದು ಅದು ಮಾಯವಾಗಿದೆ. ಇಂದು ಉತ್ತರ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಬೀದಿ ದೀಪಗಳು ಬೆಳಗುತ್ತಿವೆ ಎಂದರು.
ಯುಪಿ ಕೃಷಿ ರಾಜ್ಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ ಎಂದು ಯೋಗಿ ಹೇಳಿದರು. ನಾವು ಉದ್ಯೋಗದ ದೃಷ್ಟಿಕೋನದಿಂದ ನೋಡಿದರೆ, ಜವಳಿ ಉದ್ಯಮವು ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿದೆ. ಯುಪಿ ಜವಳಿ ಉದ್ಯಮದ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಇಲ್ಲಿ ಕೈಮಗ್ಗ, ಪವರ್ಲೂಮ್, ವಾರಣಾಸಿ ಮತ್ತು ಅಜಂಗಢದ ರೇಷ್ಮೆ ಸೀರೆಗಳು, ಭದೋಹಿಯ ಕಾರ್ಪೆಟ್ಗಳು, ಲಖನೌದ ಚಿಕಂಕರಿ ಮತ್ತು ಸಹರಾನ್ಪುರದ ಕರಕುಶಲ ಎಲ್ಲವೂ ಜಗತ್ಪ್ರಸಿದ್ಧವಾಗಿವೆ. ಕಾನ್ಪುರ ಒಂದು ಕಾಲದಲ್ಲಿ ಜವಳಿ ಉದ್ಯಮದ ಕೇಂದ್ರವಾಗಿತ್ತು. ಇದನ್ನು 4-5 ಮಹಾನಗರಗಳಲ್ಲಿ ಪರಿಗಣಿಸಲಾಗುತ್ತಿತ್ತು ಎಂದು ಅವರು ಹೇಳಿದರು.