ಬೆಂಗಳೂರು, ಏ 18 (DaijiworldNews/HR): ಸುಡಾನ್ನಲ್ಲಿ ನಡೆಯುತ್ತಿರುವ ಸೇನೆ ಹಾಗೂ ಅರಸೇನಾ ಪಡೆಗಳ ನಡುವಿನ ಕಾದಾಟದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಹಕ್ಕಿ ಪಿಕ್ಕಿ ಜನರನ್ನು ಕೂಡಲೇ ಸುರಕ್ಷಿತವಾಗಿ ಕರೆತರುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, "ಸುಡಾನ್ನ ಅಂತರ್ಯುದ್ಧದಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟಿಗೆ ಸೇರಿದ 31 ಜನರು ಸಿಲುಕಿದ್ದಾರೆ ಎಂದು ವರದಿ ಆಗಿದೆ. ಸಂಘರ್ಷ ಸಮಯದಲ್ಲಿ ಕರ್ನಾಟಕದ ಈ ಬುಡಕಟ್ಟು ನಿವಾಸಿಗಳು ಅಲ್ಲಿ ಆಹಾರವಿಲ್ಲದೇ ತತ್ತರಿಸಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ" ಎಂದು ಆರೋಪಿಸಿದ್ದಾರೆ.
ಇನ್ನು "ತಕ್ಷಣ ಕೇಂದ್ರ ಬಿಜೆಪಿ ಸರ್ಕಾರ, ಪ್ರಧಾನಿ ಕಾರ್ಯಾಲಯ ಹಾಗೂ ಪ್ರಧಾನಿ ನರೇಂದ್ರ ಮೋದಿಯಾವರು ಮಧ್ಯೆ ಪ್ರವೇಶಿಸಬೇಕು. ಸುಡಾನ್ನಲ್ಲಿ ಪರದಾಡುತ್ತಿರುವ ಕನ್ನಡಿಗರನ್ನು ರಕ್ಷಣೆ ಮಾಡಬೇಕು. ಈ ಕುರಿತು ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಚರ್ಚೆಗಳನ್ನು ಮಾಡಿ ಹಕ್ಕಿ ಪಿಕ್ಕಿಗಳ ಜನಾಂಗದವರು ಯೋಗಕ್ಷೇಮ ಖಚಿತಪಡಿಸಿಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.