ಕೊಪ್ಪಳ, ಏ 17 (DaijiworldNews/MS): ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳ ಮಾತು ಕೇಳಿದರೆ ವಾಂತಿ ಬರುತ್ತದೆ ಯಾಕೆಂದರೆ ಅಲ್ಲಿ ಯಾವ ತತ್ವವೂ ಇಲ್ಲ, ಸಿದ್ಧಾಂತವೂ ಇಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಲೇವಡಿ ಮಾಡಿದ್ದಾರೆ.
ಕೊಪ್ಪಳದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, "ಹಿರಿಯ ನಾಯಕ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಿಜೆಪಿಯಿಂದ ಹೊರಬಂದಿದ್ದಾರೆ. ಮಗನ ಸಲುವಾಗಿ ಯಡಿಯೂರಪ್ಪನವರು ಮಾತ್ರ ಅಲ್ಲಿ ಉಳಿದುಕೊಂಡಿದ್ದಾರೆ. ಆ ಪಕ್ಷದ ತತ್ವ, ಸಿದ್ಧಾಂತಗಳ ಮಾತು ಕೇಳಿದರೆ ವಾಂತಿ ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಮಾತಿಗಷ್ಟೇ ಸಿದ್ದಾಂತವೆನ್ನುತ್ತದೆ. ಅಲ್ಲಿ ಯಾವ ತತ್ವವೂ ಇಲ್ಲ, ಸಿದ್ಧಾಂತವೂ ಇಲ್ಲ. ಸುಮಾರು 12 ವರ್ಷಗಳ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚಿಸಲು ನಾನು ಪ್ರಮುಖ ಪಾತ್ರ ವಹಿಸಿದ್ದೆ. ಈಗ ಬಿಜೆಪಿಯಲ್ಲಿ ಇರುವವರು ತಂತ್ರ, ಕುತಂತ್ರ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಪಕ್ಷ ನಿಷ್ಠರನ್ನು ಹೊರ ದಬ್ಬುತ್ತಾರೆ’ ಎಂದು ಹರಿಹಾಯ್ದರು.