ಪಾಟ್ನಾ, ಏ 18 (DaijiworldNews/HR): ಪಾಟ್ನಾದ ಮನೇರ್ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಿಸಲು ಬಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.
ಮನೇರ್ನಲ್ಲಿರುವ ಕೊಯಿಲ್ವಾರ್ ಸೇತುವೆಯ ಬಳಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸಲು ಅಧಿಕಾರಿಗಳ ತಂಡ ತೆರಳಿದೆ. ಈ ವೇಳೆ ಇಬ್ಬರು ಮಹಿಳಾ ಅಧಿಕಾರಿ ಸೇರಿ ಒಟ್ಟು ಮೂವರು ಅಧಿಕಾರಿಗಳಿಗೆ ಅಲ್ಲಿದ್ದ ಜನರು ಬೆದರಿಕೆಯನ್ನು ಹಾಕಿದ್ದಾರೆ. ಇದಾದ ಬಳಿಕ ಅವರೊಂದಿಗೆ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾರೆ.
ಇನ್ನು ಮೊದಲು ಕಲ್ಲು ತೂರಾಟ ನಡೆಸಿ, ಆ ಬಳಿಕ ಹಲ್ಲೆ ಮಾಡಿದ್ದಾರೆ. ಒಬ್ಬ ಮಹಿಳಾ ಅಧಿಕಾರಿಯನ್ನು ಕೆಳಕ್ಕೆ ಹಾಕಿ ಕೂದಲು ಹಿಡಿದು ಎಳೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯತ್ನಿಸಿದ್ದರೂ ಅಲ್ಲಿದ್ದ ಗುಂಪು ಅಧಿಕಾರಿಗಳನ್ನು ಕಲ್ಲು, ಕೋಲಿನಿಂದ ಹಲ್ಲೆಗೈದು ಅಟ್ಟಾಡಿಸಿಕೊಂಡು ಹೊಡೆದಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, 44 ಜನರ ವಿರುದ್ಧ ಕೇಸ್ ದಾಖಲಿಸಿ, 50 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.