ನವದೆಹಲಿ, ಏ 17 (DaijiworldNews/MS): ಸಲಿಂಗ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭಾನುವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಗಳು ವಿಚಾರಣಾರ್ಹವೇ ಎಂಬ ಬಗ್ಗೆ ಮೊದಲು ನಿರ್ಧರಿಸುವಂತೆ ನ್ಯಾಯಾಲಯವನ್ನು ಕೋರಿದೆ. ಶಾಸಕಾಂಗ ಜನರಿಗೆ ಉತ್ತರದಾಯಿಯಾಗಿದ್ದು ಅದರಲ್ಲಿಯೂ ವೈಯಕ್ತಿಕ ಕಾನೂನುಗಳಲ್ಲಿ ಜನಮನ್ನಣೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಅಲ್ಲದೇ ಮದುವೆಗೆ ಅಂಗೀಕಾರ ನೀಡುವುದು ಶಾಸಕಾಂಗದ ಕೆಲಸವಾಗಿದ್ದು, ಕೋರ್ಟ್ ಇದರಿಂದ ಹಿಂದೆ ಸರಿಯಬೇಕು ಎಂದು ಹೇಳಿದೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಸಲ್ಲಿಸಲಾಗಿರುವ ಹಲವು ಅರ್ಜಿಗಳ ಸಂಬಂಧ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ನೀಡಿದ ಅಫಿಡವಿಟ್ನಲ್ಲಿ ಹೀಗೆ ಹೇಳಿದೆ. ಅರ್ಜಿಗಳು ಸಾಮಾಜಿಕ ಮನ್ನಣೆ ದೊರೆಯಲಿ ಎಂಬ ಉದ್ದೇಶಕ್ಕಾಗಿ ಕೇವಲ ʼನಗರ ಗಣ್ಯರʼ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತವೆ. ವಿಶಾಲವಾದ ದೃಷ್ಟಿಕೋನಗಳನ್ನು ಶಾಸಕಾಂಗ ಪರಿಗಣಿಸಬೇಕಾಗುತ್ತದೆ
ಸಮರ್ಥ ಶಾಸಕಾಂಗವು ಗ್ರಾಮೀಣ, ಅರೆನಗರ ಹಾಗೂ ನಗರವಾಸಿಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು, ಧಾರ್ಮಿಕ ಪಂಗಡ, ವೈಯಕ್ತಿಕ ಕಾನೂನು, ವಿವಾಹ ಪದ್ಧತಿಗಳ ಜತೆಗೆ ಅದರ ಪರಿಣಾಮಗಳನ್ನು ಗಮನಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಏಪ್ರಿಲ್ 18ರಂದು ವಿಚಾರಣೆ ನಡೆಸಲಿದೆ.