ಬೆಂಗಳೂರು, ಏ 17 (DaijiworldNews/MS): ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಸೋಮವಾರ ಡಿಕೆ ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಜ್ಯೋತಿಷಿಗಳ ಪ್ರಕಾರ ಇಂದು ಶುಭ ದಿನವಾಗಿದ್ದು, ಈ ಕಾರಣದಿಂದಲೇ ಸೋಮವಾರ ಹೆಚ್ಚಿನ ನಾಯಕರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.
ಕಾಂಗ್ರೆಸ್ನಿಂದ ಡಿ.ಕೆ.ಶಿವಕುಮಾರ್ ಅವರು ಕನಕಪುರ ಕ್ಷೇತ್ರದಿಂದ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಅದೇರೀತಿ, ಹೊಸಕೋಟೆ ಕ್ಷೇತ್ರದಿಂದ ಶರತ್ ಬಚ್ಚೇಗೌಡ, ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ನಂಜನಗೂಡು ಕ್ಷೇತ್ರದಿಂದ ದರ್ಶನ್ ಧ್ರುವನಾರಾಯಣ್ ಹಾಗೂ ಕಲಘಟಗಿ ಕ್ಷೇತ್ರದಿಂದ ಸಂತೋಷ್ ಲಾಡ್ ನಾಮಿನೇಷನ್ ಫೈಲ್ ಮಾಡಿದ್ದಾರೆ.
ಬಿಜೆಪಿ ಪಕ್ಷದಿಂದಲೂ ಪ್ರಮುಖ ನಾಯಕರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವರುಣಾದಿಂದ ವಿ.ಸೋಮಣ್ಣ ನಾಮಿನೇಷನ್ ಫೈಲ್ ಮಾಡಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಕೂಡ ಹಾಜರಿದ್ದರು. ಅಲ್ಲದೆ ಹೊಸಕೋಟೆಯಿಂದ ಎಂಟಿಬಿ ನಾಗರಾಜ್, ಸೊರಬ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪ, ಮಲ್ಲೇಶ್ವರಂ ಕ್ಷೇತ್ರದಿಂದ ಅಶ್ವತ್ಥ ನಾರಾಯಣ್ ಹಾಗೂ ಬೆಳ್ತಂಗಡಿ ಕ್ಷೇತ್ರದಿಂದ ಹರೀಶ್ ಪೂಂಜಾ, ಶಿಕಾರಿಪುರ-ವಿಜಯೇಂದ್ರ, ಮದ್ದೂರು-ಎಸ್.ಪಿ.ಸ್ವಾಮಿ, ಮೇಲುಕೋಟೆ-ಡಾ.ಇಂದ್ರೇಶ್, ಅಥಣಿ-ಮಹೇಶ್ ಕುಮಟಳ್ಳಿ, ಕಾರವಾರ-ರೂಪಾಲಿ ನಾಯ್ಕ್, ಹಿರಿಯೂರು-ಪೂರ್ಣಿಮಾ, ದಾಸರಹಳ್ಳಿ-ಎಸ್.ಮುನಿರಾಜು ನಾಮಪತ್ರ ಹಾಕಿದ್ದಾರೆ.
ಇನ್ನೊಂದೆಡೆ, ಜೆಡಿಎಸ್ನಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ನಾಮಪತ್ರ ಹಾಕಿದ್ದಾರೆ. ರಾಮನಗರ ಕ್ಷೇತ್ರದಿಂದ ಪುತ್ರ ನಿಖಿಲ್, ಹಾಸನದಿಂದ ಹೆಚ್.ಪಿ. ಸ್ವರೂಪ್ ಹಾಗೂ ಹೊಳೆನರಸೀಪುರ ಕ್ಷೇತ್ರದಿಂದ ಎಚ್.ಡಿ. ರೇವಣ್ಣ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಪಕ್ಷೇತರರಾಗಿ ಪುತ್ತೂರು ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಸಿದ್ದಾರೆ