ಚಿಕ್ಕಮಗಳೂರು, ಎ17 (DaiiworldNews/HR): "ನಿನ್ನೆವರೆಗೆ ಕಾಂಗ್ರೆಸ್ ಕೋಮಾದಲ್ಲಿದೆ, ಐಸಿಯುನಲ್ಲಿದೆ ಅದನ್ನು ಯಾರೂ ಬದುಕಿಸಲು ಆಗುವುದಿಲ್ಲ ಎಂದ ನೀವೇ ಕೋಮಾಗೆ ಹೋಗಿರುವ ಪಾರ್ಟಿಗೆ ಹೋಗಿ ಹೋಗಿರುವುದು ದುರಾದೃಷ್ಟಕರ" ಎಂದು ಜಗದೀಶ್ ಶೆಟ್ಟರ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರೇಂದ್ರ ಪಾಟೀಲ್ ಬಳಿಕ ಯಾವ ವೀರಶೈವ ಮುಖಂಡರಿಗೆ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ. ಅವರಿಗೆ ಸಾಮರ್ಥ್ಯವಿದ್ದರೆ ವೀರಶೈವ ಮುಖಂಡರನ್ನು ಸಿಎಂ ಎಂದು ಘೋಷಣೆ ಮಾಡಲಿ. ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಎಂದು ಘೋಷಣೆ ಮಾಡಲಿ ಎಂದರು.
ಇನ್ನು ಬಿಜೆಪಿ ಹಿಂದುತ್ವದ ತತ್ವದ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಿರುವ ಪಕ್ಷವಾಗಿದ್ದು, ಬಿಜೆಪಿ ಬೆಳವಣಿಗೆಯನ್ನು ಯಾರೂ ತಡೆಯಲು ಆಗುವುದಿಲ್ಲ ಎಂದಿದ್ದಾರೆ.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟದ್ದು ದುರಾದೃಷ್ಟಕರ. ಸಾಧಕ ಬಾಧಕಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಇಷ್ಟು ದಿನ ಬಿಜೆಪಿ ಪರ, ಕಾಂಗ್ರೆಸ್ ವಿರುದ್ಧದ ರಾಜಕಾರಣ ಮಾಡಿದವರು ಈಗ ಅದೇ ಪಕ್ಷಕ್ಕೆ ಹೋಗಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ.