ಬೆಂಗಳೂರು, ಏ 17 (DaijiworldNews/MS): ಲಿಂಗಾಯತ ಸಮುದಾಯದ ಹಿರಿಯ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ನಿವೃತ್ತಿ ಪಡೆದ ಬಳಿಕ ನಾನು ಸಮುದಾಯದ ಹಿರಿಯನಾಗಿರುತ್ತೇನೆಂಬ ಭಯದಿಂದ ವ್ಯವಸ್ಥಿತವಾಗಿ ಕುತಂತ್ರ ಹೆಣೆದು ನನ್ನನ್ನು ಬಿಜೆಪಿಯಿಂದ ಹೊರಹಾಕಿದ್ದಾರೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಬಿ-ಫಾರಂ ಕೂಡ ಪಡೆದರು. ಧಾರವಾಡ ಕೇಂದ್ರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೆಟ್ಟರ್ ಸ್ಪರ್ಧಿಸುತ್ತಾರೆ.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ಮಾಜಿ ಸಿಎಂ ಸಿದ್ದರಾಮಯ್ಯ "ಯಾವುದೇ ಕಾರಣ ಇಲ್ಲದೇ, ಆರೋಪವಿಲ್ಲದೆ, ಬಿಜೆಪಿಯವರು ವರಿಗೆ ಟಿಕೆಟ್ ವಂಚಿಸಿದ್ದಾರೆ. ಇದು ದುರುದ್ದೇಶ ಎಂದು ಎಲ್ಲರಿಗೂ ಅರ್ಥವಾಗುತ್ತದೆ. ನಾನು ನೋಡಿದಾಗೆ ಶೆಟ್ಟರ್ ಅವರು ರಾಜ್ಯದ ರಾಜಕಾರಣಿಗಳಲ್ಲಿ ಸ್ವಾಭಿಮಾನಿ ರಾಜಕಾರಣಿ. ಎವರು ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿಲ್ಲ. ಈಗ ಅವರ ಸ್ವಾಭಿಮಾನ, ಸಮುದಾಯಕ್ಕೆ ಧಕ್ಕೆಯಾಗಿದೆ. ಅವರ ಅನುಯಾಯಿ, ಸ್ನೇಹಿತರಿಗೆ ಧಕ್ಕೆಯಾಗಿದೆ. ಇದು ಸಹಿಸಲಾಗದ ಅಪಮಾನ. ನಾನು ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಇಂತಹ ಅನ್ಯಾಯವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅವರನ್ನು ಭೇಟಿಯಾದಾಗ ಹೇಳಿದೆ. ಈ ರೀತಿ ಏಕಾಏಕಿ, ಯಾವುಜದೇ ಮುನ್ಸೂಚನೆ ಲ್ಲದೆ ಟಿಕೆಟ್ ತಪ್ಪಿಸಿರುವುದು ಘೋರ ಅಪರಾಧ. ಅವರು ತಮ್ಮ ಸ್ವಾಭಿಮಾನ ರಕ್ಷಣೆಗೆ ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ಅವರು ಎಲ್ಲರ ಜತೆ ಚರ್ಚಿಸಿ ಅಳೆದು ತೂಗಿ ಇದನ್ನು ಸವಾಲು ಎಂದು ಸ್ವೀಕರಿಸಿ ಅಂತಿಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಅವರು ಪಕ್ಷ ಸೇರುತ್ತಿದ್ದಾರೆ. ನಾವೆಲ್ಲರೂ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.