ಬೆಂಗಳೂರು, ಏ 16 (DaijiworldNews/SM): ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಗೆ ಪಕ್ಷ ಅನೇಕ ಅವಕಾಶಗಳನ್ನು ನೀಡಿದೆ. ವಿವಿಧ ಅವಕಾಶಗಳನ್ನು ನೀಡಿದ ಬಳಿಕವೂ ಪಕ್ಷದ ತತ್ತ್ವ ಸಿದ್ಧಾಂತಗಳನ್ನು ಮೆಟ್ಟಿ ನಡೆದಿರುವುದು ಸಹಿಸಲು ಅಸಾಧ್ಯವಾಗಿದೆ. ನಾಡಿನ ಜನತೆ ಅವರು ನಡೆದುಕೊಂಡ ರೀತಿ ಗಮನಿಸಿದ್ದು, ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಬ್ಬರು ನಾಯಕರ ನಿರ್ಧಾರವನ್ನು ಖಂಡಿಸಿದ್ದಾರೆ. ಅಲ್ಲದೆ ತಾವು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿದ್ದರು. ಜಗದೀಶ್ ಶೆಟ್ಟರ್ರನ್ನು ಶಾಸಕ, ಮಂತ್ರಿ, ಸಿಎಂ ಮಾಡಿದ್ದೆವು. ಜಗದೀಶ್ ಶೆಟ್ಟರ್ ಅವರಿಗೆ ನಾನು, ಅನಂತಕುಮಾರ್ ಕಾವಲಾಗಿದ್ದೆವು. ನನ್ನ ಜತೆ ಹೆಜ್ಜೆ ಹಾಕುವ ಜವಾಬ್ದಾರಿ ಜಗದೀಶ್ ಶೆಟ್ಟರ್ಗೆ ಇತ್ತು. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ. ಇಂಥ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ, ನಿರ್ಧಾರ ಅವರು ನಂಬಿದ ವಿಚಾರಕ್ಕೆ ತದ್ವಿರುದ್ಧ ಇದೆ. ಸ್ಥಾನಮಾನ ಸಿಗಲಿ ಸಿಗದಿರಲಿ. ದೇಶಕ್ಕಾಗಿ ಕೆಲಸ ಮಾಡಬೇಕಿರೋದು ನಾವು ನಡೆದುಕೊಂಡು ಬಂದ ದಾರಿ. ಪಕ್ಷದ ಸಹಕಾರ ಇಲ್ಲದಿದ್ದರೇ ವ್ಯಕ್ತಿ ಎತ್ತರಕ್ಕೆ ಬೆಳೆಯಲ್ಲ. ಪಕ್ಷದ ಸಹಕಾರ ಇಲ್ಲದಿದ್ರೆ ವ್ಯಕ್ತಿ ಸಿಎಂ ಆಗಲಾರ ಎಂದು ಹೇಳಿದರು.