ನವದೆಹಲಿ, ಏ 15 (DaijiworldNews/MS): 'ಸಂಪ್ರದಾಯ ಮತ್ತು ಸಂಸ್ಕೃತಿಯಂತೆ ಮಗಳ ಅಂತಿಮ ವಿಧಿಗಳನ್ನು ನಿರ್ವಹಿಸುವ ಅಗತ್ಯವಿದೆ. ಹೀಗಾಗಿ ಅಂತ್ಯಕ್ರಿಯೆಗಾಗಿ ಅಸ್ಥಿಯನ್ನು ನೀಡುವಂತೆ' ಕೋರಿ ಸಹಜೀವನ ಸಂಗಾತಿಯಿಂದಲೇ ಹತ್ಯೆಗೊಳಗಾದ ಶ್ರದ್ಧಾ ವಾಲ್ಕರ್ ತಂದೆ ವಿಕಾಸ್ ಮದನ್ ವಾಲ್ಕರ್ ಶನಿವಾರ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ವರ್ಷ ಮೇ 18 ರಂದು ಶ್ರದ್ಧಾ ಅವರ ಸಹಜೀವನ ಸಂಗಾತಿ ಅಫ್ತಾಬ್ ಅಮೀನ್ ಪೂನಾವಾಲಾ ಆಕೆಯ ಕತ್ತು ಹಿಸುಕಿ ಕೊಲೆಗೈದು, ಆಕೆಯ ದೇಹವನ್ನು ತುಂಡರಿಸಿ, ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಆತನ ಬಾಡಿಗೆ ಪ್ಲ್ಯಾಟ್ ನಲ್ಲಿ ಸುಮಾರು ಮೂರು ವಾರಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿ, ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲು ಅವರು ರಾಷ್ಟ್ರ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಎಸೆದು ಬಂದಿದ್ದನು. ಈ ಪ್ರಕರಣ ದೇಶದಾದ್ಯಂತ ಸಂಚಲನ ಉಂಟುಮಾಡಿತ್ತು.
ಸಂಪ್ರದಾಯದ ಪ್ರಕಾರ ಮೃತಪಟ್ಟ ಒಂದು ವರ್ಷದ ಒಳಗೆ ಅಂತ್ಯಸಂಸ್ಕಾರ ನೆರವೇರಿಸಬೇಕು. ಹಿಂದೂ ಕ್ಯಾಲೆಂಡರ್ ಪ್ರಕಾರ ಮೇ 8ರ ಒಳಗಾಗಿ ಅಂತಿಮ ವಿಧಿವಿಧಾನ ನೆರವೇರಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ ಏ.29ರಂದು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ದೆಹಲಿ ಪೊಲೀಸರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೀಶ್ ಖುರಾನಾ ಕಕ್ಕರ್ ಅವರಿಗೆ ತಿಳಿಸಿದ್ದಾರೆ.
ವಿಕಾಸ್ ಮದನ್ ವಾಲ್ಕರ್ ಪರವಾಗಿ ವಕೀಲೆ ಸೀಮಾ ಕುಶ್ವಾಹ ಅವರು ಸಲ್ಲಿಸಿದ ಅರ್ಜಿ ಸಲ್ಲಿಸಿದ್ದಾರೆ.