ಹುಬ್ಬಳ್ಳಿ, ಏ 15 (DaijiworldNews/HR): ನಾವು ರಾಜಕಾರಣಕ್ಕೆ ಬರುವುದಕ್ಕಿಂತ ಮೊದಲೇ ಜಗದೀಶ್ ಶೆಟ್ಟರ್ ಹಾಗೂ ನಾನು ಸ್ನೇಹಿತರು. ಅವರಿಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡುತ್ತಿಲ್ಲ. ಅವರ ಬೆಂಬಲಿಗರ ಮಾತಿನಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ನಿತ್ಯವೂ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ ತಪ್ಪಿಸಲು ಕೆಲಸ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ಇನ್ನು ಜಗದೀಶ ಶೆಟ್ಟರ್ ಬಿಜೆಪಿಯ ನಿಷ್ಠಾವಂತ ನಾಯಕರಾಗಿದ್ದು, ಅವರದ್ದು ಜನಸಂಘ ಕಾಲದ ಮನೆತನ. ಉತ್ತರ ಕರ್ನಾಟಕ ಭಾಗಕ್ಕೆ ಅವರು ಅಗತ್ಯವಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಉಳಿಸಿಕೊಳ್ಳಬೇಕೆಂದು ವರಿಷ್ಠರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.