ತುಮಕೂರು, ಏ 14 (DaijiworldNews/SM): ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಕ್ಕದ ರಸ್ತೆಗೆ ಹಾರಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ಸರಹದ್ದಿನ ಹಿರೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಸುಮಾರು 8ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಗೋವಿಂದ ನಾಯಕ (58), ತಿಪ್ಪಮ್ಮ, (52), ದಿನೇಶ್ (12), ಪಿಂಕಿ (15) ಹಾಗೂ ಕುಣಿಗಲ್ ತಾಲೂಕಿನ ನಿವಾಸಿ ಕಾರು ಚಾಲಕ ರಾಜೇಶ್ ಎಂಬವರು ಮೃತ ದುರ್ದೈವಿಗಳು. ಸಿರಾ ಕಡೆಯಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಬೆಂಗಳೂರು ಕಡೆಯಿಂದ ಜಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ಪೈಕಿ ಶ್ರೀಕಂಠಪ್ಪ, ಮಂಜುನಾಥ್, ಬುಡ್ಡಮ್ಮ, ಭಾಗ್ಯಮ್ಮ ಸೇರಿದಂತೆ 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾರಿಗೆ ಢಿಕ್ಕಿ ಹೊಡೆದ ನಂತರ ಬಸ್ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಅಪ್ಪಳಿಸಿದೆ.
ರಸ್ತೆ ವಿಭಜಕ ಹಾರಿ ಬಸ್ ಅಪ್ಪಳಿಸಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ನ ಮುಂಭಾಗ ಸಹ ಜಖಂಗೊಂಡಿದೆ. ಘಟನೆಗೆ ಖಾಸಗಿ ಬಸ್ ಚಾಲಕನ ಅತಿಯಾದ ವೇಗವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.