ವಿಜಯಪುರ, ಏ 14 (DaijiworldNews/SM): ವ್ಯಕ್ತಿಯೋರ್ವ ತನ್ನ ಹೊಲದಲ್ಲಿ ಬೆಳೆಸಿದ್ದ ಗಾಂಜಾ ಗಿಡವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಗ್ರಾಮ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಲಗಲದಿನ್ನಿ ಗ್ರಾಮ ವ್ಯಾಪ್ತಿಯ ಬಸವರಾಜ ಮಲ್ಲೇಶಪ್ಪ ಬಿರಾದಾರ ಎಂಬಾತನ ಹೊಲದಲ್ಲಿ ಬೆಳೆಗಳ ಮಧ್ಯೆ ಕಾನೂನು ಬಾಹಿರವಾಗಿ ಬೆಳೆಸಿದ್ದ ಸುಮಾರು 1.80 ಲಕ್ಷ ಮೌಲ್ಯದ 36.820 ಕೆಜಿಯಷ್ಟು ಹಸಿ ಗಾಂಜಾ ಬೆಳೆಯನ್ನು ಮುದ್ದೇಬಿಹಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಗಿಡ ಬೆಳೆದಿರುವ ಬಗ್ಗೆ ಒದಗಿದ ಖಚಿತ ಮಾಹಿತಿ ಮೇರೆಗೆ ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ನೇತೃತ್ವದಲ್ಲಿ ಪಿಎಸೈ ಆರೀಫ ಮುಷಾಪುರಿ ಮತ್ತು ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ಅಲ್ಲಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗಳಾದ ಗೋವಿಂದ ಗೆಣ್ಣೂರ, ವಿರೇಶ ಹಾಲಗಂಗಾಧರಮಠ, ಮಲ್ಲನಗೌಡ ಬೋಳರೆಡ್ಡಿ, ಚಿದಾನಂದ್ ಸುರುಗಿಹಳ್ಳಿ, ಶ್ರೀಕಾಂತ ಬಿರಾದಾರ, ನರಸಿಂಹ ಚೌಧರಿ, ಶಿವರಾಜ ನಾಗರೆಡ್ಡಿ, ಮಂಜುನಾಥ ಬುಳ್ಳ, ಮಾಳಪ್ಪ ನಾಲತವಾಡ, ರವಿ ಲಮಾಣಿ ಭಾಗವಹಿದ್ದರು. ಗೆಜೆಟೆಡ್ ಅಧಿಕಾರಿಯಾಗಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ನಾಗರಬೆಟ್ಟ ಗ್ರಾಪಂ ಸಿಬ್ಬಂದಿ ನೇತೃತ್ವದಲ್ಲಿ ವಶಪಡಿಸಿಕೊಂಡ ಗಾಂಜಾ ಗಿಡಗಳ ಪಂಚನಾಮೆ ನಡೆಸಲಾಯಿತು.