ನವದೆಹಲಿ, ಏ 14 (DaijiworldNews/MS): ದೇಶದಲ್ಲಿ ಕೋವಿಡ್ನ ಹೊಸ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯತ್ತ ಸಾಗುತ್ತಿದೆ. ಭಾರತ ಮಾತ್ರವಲ್ಲ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ಕೋವಿಡ್ನ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಾಣುತ್ತಿದೆ.
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಮುಂದಿನ 10-12 ದಿನಗಳಲ್ಲಿ ಕೊರೊನಾ ಸೋಂಕು ಮತ್ತಷ್ಟು ತೀವ್ರವಾಗಿ ಹರಡಲಿದೆ. ಹೆಚ್ಚುತ್ತಿರುವ ಪ್ರಕರಣಗಳನ್ನು ನಿಭಾಯಿಸುವುದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ.
ರಾಜ್ಯದಲ್ಲಿಮುಂಜಾಗ್ರತಾ ಕ್ರಮವಾಗಿ ದೈನಂದಿನ ಕೋವಿಡ್ ಪರೀಕ್ಷೆಗಳ ಗುರಿಯನ್ನು 20 ಸಾವಿರಕ್ಕೆ ಹೆಚ್ಚಿಸಿರುವ ರಾಜ್ಯ ಸರ್ಕಾರ, ಮನೆ ಹಾಗೂ ಕಚೇರಿಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ.
ಕೋವಿಡ್ ಬಂದರೂ ರೋಗದ ತೀವ್ರತೆ ಕಡಿಮೆ ಇದೆ. ಇದರಿಂದ ಮೃತಪಡುವವರ ಸಂಖ್ಯೆ ಏರಿಕೆಯಾಗಿದ್ದರೂ ಒಟ್ಟು ಪ್ರಕರಣಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಕೋವಿಡ್ಗೆ ಹೆದರುವ ಅಗತ್ಯವಿಲ್ಲ. ಆದರೆ, ಅದು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಪತಿಯೊಬ್ಬರ ಕರ್ತವ್ಯವಾಗಿದೆ.