ಮೈಸೂರು, ಏ 13 (DaijiworldNews/HR): ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪಕ್ಷ ತೊರೆದು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತಿದ್ದು, ಇದೀಗ ಕೇಂದ್ರದ ಮಾಜಿ ಸಚಿವ, ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
2024 ರಲ್ಲಿ ಸಂಸದರ ಅವಧಿ ಕೊನೆಗೊಂಡ ನಂತರ ಸಕ್ರಿಯ ರಾಜಕೀಯದಿಂದ ಹೊರನಡೆಯುವುದಾಗಿ ಹೇಳಿದ್ದಾರೆ.
ಇನ್ನು 2013ರ ವಿಧಾನಸಭೆ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂದು ಶ್ರೀನಿವಾಸ್ ಪ್ರಸಾದ್ ಈ ಹಿಂದೆಯೇ ಘೋಷಿಸಿದ್ದರು. ಆದರೆ 2016 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಕಂದಾಯ ಸಚಿವ ಸ್ಥಾನದಿಂದ ಕೈಬಿಟ್ಟಾಗ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ಗೆ ವಿದಾಯ ಹೇಳಿ ಬಿಜೆಪಿ ಸೇರಿದ್ದರು.
ಅವರು ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ 2017 ರಲ್ಲಿ ಸೋತರು. ನಂತರ, 2019 ರಲ್ಲಿ ನಡೆದ ಚಾಮರಾಜನಗರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದಿದ್ದರು.