ಪಂಜಾಬ್, ಏ 13(DaijiworldNews/MS): ಪಂಜಾಬ್ನ ಬಟಿಂಡಾ ಮಿಲಿಟರಿ ಠಾಣೆ ಮೇಲೆ ನಡೆದ ದುಷ್ಕರ್ಮಿಗಳ ಗುಂಡಿನ ದಾಳಿಗೆ ಕರ್ನಾಟಕದ ಇಬ್ಬರು ವೀರಮರಣ ಹೊಂದಿದ್ದಾರೆ.
ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಸಾಗರ ಅಪ್ಪಾಸಾಹೇಬ ಬನ್ನೆ(೨೫) ಹಾಗೂ ಬಾದಾಮಿ ತಾಲೂಕಿನ ಹನಮನೇರಿ ಗ್ರಾಮದ ಸೈನಿಕ ಸಂತೋಷ ಮಲ್ಲಪ್ಪ ನಾಗರಾಳ(೨೪) ಹುತಾತ್ಮರಾಗಿದ್ದಾರೆ. ಇವರಲ್ಲದೆ ತಮಿಳುನಾಡಿನ ಕಮಲೇಶ್ ಆರ್. (24) ಯೋಗೇಶ್ ಕುಮಾರ್ ಜೆ. (24) ಮೃತಪಟ್ಟಿದ್ದಾರೆ.
ಸಾಗರ್ ಬನ್ನೆಯ ವಿವಾಹ ಮೇ ೨೧ಕ್ಕೆ ನಿಗದಿಯಾಗಿದ್ದು, ಏ.೧೮ರಂದು ಅವರು ಊರಿಗೆ ಬರುವವರಿದ್ದರು. ಸಂತೋಷ್ ಕೂಡ ೪ ವರ್ಷದಿಂದ ಪಂಜಾಬ್ ರೆಜಿಮೆಂಟ್ನಲ್ಲಿದ್ದರು. ಇಬ್ಬರ ಮೃತದೇಹ ಇಂದು ರಾಜ್ಯಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಗುಂಡಿನ ದಾಳಿ ಬಳಿಕ ಶ್ವೇತ ವರ್ಣದ ಕುರ್ತಾ ಹಾಗೂ ಪೈಜಾಮ ಧರಿಸಿದ್ದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬ್ಯಾರೆಕ್ನಿಂದ ಹೊರಬರುತ್ತಿದ್ದುದ್ದನ್ನು ಸೈನಿಕರೊಬ್ಬರು ನೋಡಿದ್ದಾರೆ. ಈ ಪೈಕಿ ಒಬ್ಬಾತ ಇನ್ಸಾಸ್ ರೈಫಲ್ ಹಿಡಿದಿದ್ದ. ಮತ್ತೊಬ್ಬನ ಕೈಯಲ್ಲಿ ಕೊಡಲಿ ಇತ್ತು ಎಂಬುದಾಗಿ ಅವರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.