ಬೆಂಗಳೂರು, ಏ 12 (DaijiworldNews/MS): ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಆರ್.ಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ.ಬಿಜೆಪಿ ಟಿಕೆಟ್ ನೀಡದೆ ಇದ್ದದ್ದಕ್ಕೆ ಆಕ್ರೋಶವನ್ನು ಹೊರ ಹಾಕಿದ್ದ ಅವರು, ವಿಧಾನಸೌಧದಲ್ಲಿ ಬುಧವಾರ ಪರಿಷತ್ ಸಭಾಪತಿ ಬಸವರಾಜು ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಹಾವೇರಿಯ ರಾಣೆಬೆನ್ನೂರು ಕ್ಶೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್. ಶಂಕರ್, ಬಿಜೆಪಿ ಹಾಲಿ ಶಾಸಕ ಅರುಣ್ ಕುಮಾರ್ಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಬುಧವಾರ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅತ್ತ ಕಾಂಗ್ರೆಸ್ ಟಿಕೆಟ್ಗೂ ಪ್ರಯತ್ನ ಪಟ್ಟು ನಿರಾಸೆಯಾಗಿದ್ದ ಅವರು, ಇತ್ತ ಬಿಜೆಪಿ ಟಿಕೆಟ್ ಕೂಡಾ ಮಿಸ್ ಆಗಿದ್ದರಿಂದ ಬೇಸರಗೊಂಡಿದ್ದರು. ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಅವರೇ ಸ್ಪಷ್ಟ ಪಡಿಸಬೇಕಿದೆ.