ಬೆಂಗಳೂರು, ಏ 12(DaijiworldNews/MS): ರಾಜ್ಯದಲ್ಲಿ ಮೇ10ರಂದು ನಡೆಯಲಿರುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, ಗುರುವಾರ(ನಾಳೆ)ದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.ಇದರೊಂದಿಗೆ ವಿಧಾನಸಭೆ ಚುನಾವಣೆಯ ಅಧಿಕೃತ ಪ್ರಕ್ರಿಯೆಗಳು ಆರಂಭವಾಗಲಿವೆ.
ಏ.20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.21ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು, ಉಮೇದುವಾರಿಕೆ ವಾಪಾಸ್ ಪಡೆಯಲು ಏ.24ರಂದು ಕೊನೆಯ ದಿನವಾಗಿದೆ. ಮೇ.೧೦ ಕ್ಕೆ ಮತದಾನ ನಡೆಯಲಿದ್ದು, ಮೇ ೧೩ಕ್ಕೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ.
ಹೀಗಾಗಿ, ಎಲ್ಲ ಪಕ್ಷಗಳ ಅಭ್ಯರ್ಥಿಗಳು ನಾಳೆಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 5.24 ಕೋಟಿ ಮತದಾರರಿದ್ದು, ಆ ಪೈಕಿ 2.63ಕೋಟಿ ಪುರುಷರು, 2.60ಕೋಟಿ ಮಹಿಳೆಯರಾಗಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿದ್ದು, ಎಸ್ಸಿಗೆ 36 ಮತ್ತು ಎಸ್ಟಿಗೆ 15 ವಿಧಾನಸಭಾ ಕ್ಷೇತ್ರಗಳನ್ನು ಮೀಸಲಿಡಲಾಗಿದೆ.