ನವದೆಹಲಿ, ಏ.10 (DaijiworldNews/SM): ಭಾರತೀಯ ಚುನಾವಣಾ ಆಯೋಗ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ನೀಡಿದೆ ಮತ್ತು ಎನ್ ಸಿಪಿ, ಟಿಎಂಸಿ ಮತ್ತು ಸಿಪಿಐ ಪಕ್ಷಗಳ ರಾಷ್ಟ್ರೀಯ ಸ್ಥಾನಮಾನವನ್ನು ರದ್ದುಪಡಿಸಿದೆ.
ಎಎಪಿಯ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಏಪ್ರಿಲ್ 13 ರೊಳಗೆ ಸೂಕ್ತ ಆದೇಶಗಳನ್ನು ನೀಡುವಂತೆ ಕಳೆದ ವಾರ, ಕರ್ನಾಟಕ ಹೈಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನಂತರ ಏಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಬೇಕು ಎಂದು ವಿವರಣೆ ಕೇಳಿ, 2019 ಜುಲೈನಲ್ಲಿ ಎನ್ ಸಿಪಿ, ಟಿಎಂಸಿ ಮತ್ತು ಸಿಪಿಐ ಪಕ್ಷಗಳಿಗೆ ಆಯೋಗ ನೋಟಿಸ್ ನೀಡಿತ್ತು. ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968ರ ಪ್ಯಾರಾ 6ಬಿ ಅಡಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಮಾನ್ಯತೆ ಪಡೆದ ಪಕ್ಷವಾಗಿದ್ದರೆ ರಾಷ್ಟ್ರೀಯ ಪಕ್ಷವೆಂದು ಪರಿಗಣಿಸಲು ಅರ್ಹವಾಗಿದೆ.