ಕೋಲ್ಕತಾ, ಏ 10 (DaijiworldNews/HR): ಇಬ್ಬರು ಯುವತಿಯರು ಸಿಗರೇಟ್ ಸೇದುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿ, ಹುಚ್ಚಾಟ ನಡೆಸಿದ್ದಾರೆ. ಅಲ್ಲದೇ ಈ ಸನ್ನಿವೇಶವನ್ನ ವೀಡಿಯೋ ಮಾಡಿ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.
ಈ ವೀಡಿಯೋ ಆಧರಿಸಿ ವಕೀಲ ಅತ್ರಯೀ ಹಾಲ್ದರ್ ಅವರು ಲಾಲ್ಬಜಾರ್ ಸೈಬರ್ ಘಟಕ ಹಾಗೂ ಬಾರಕ್ಪುರದಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಈ ಪೋಸ್ಟ್ ಮಾಡಲಾಗಿದ್ದ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡಿರುವುದರಿಂದ ಈಗ ವಿಡಿಯೋ ಅದರಲ್ಲಿ ಲಭ್ಯವಿಲ್ಲ. ಆದರೆ ಕೆಲವರು ವೀಡಿಯೋವನ್ನ ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಾ ಕುಳಿತಿರುವ ಯುವತಿಯರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಯ ಸಾಲುಗಳನ್ನ ವ್ಯಂಗ್ಯವಾಗಿ ಹಾಡಿ, ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.
ಕೈಯಲ್ಲಿ ಸಿಗರೇಟ್ ಹಿಡಿದು ವಿಚಿತ್ರವಾಗಿ ನಗುವ ಯುವತಿಯೊಬ್ಬಳು ರಾಷ್ಟ್ರಗೀತೆಯನ್ನು ಮನಬಂದಂತೆ ಹಾಡಿದ್ದಾಳೆ.
ಪಕ್ಕದಲ್ಲಿ ಕುಳಿತಿದ್ದ ಯುವತಿ ಸಹ ಆಕೆಯಂತೆಯೇ ವರ್ತಿಸಿದ್ದು, ಆ ಸಿಗರೇಟ್ ಅನ್ನು ಕಿತ್ತುಕೊಂಡು, ಇದು ಧ್ವಜ, ಧ್ವಜ ಎಂದು ಇಂಗ್ಲಿಷ್ನಲ್ಲಿ ಹೇಳಿದ್ದಾಳೆ. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿದ ಮೊದಲ ಯುವತಿ ಕ್ಷಮೆ ಕೇಳುತ್ತೇನೆ ಹಾಸ್ಯವಾಗಿ ಹೇಳಿದ್ದಾಳೆ.