ನವದೆಹಲಿ, ಏ 10 (DaijiworldNews/HR): 2018 ರಲ್ಲಿ ಜಸ್ಟಿಸ್ ಎಸ್ ಮುರಳೀಧರ್ ಕುರಿತಂತೆ ಟ್ವಿಟರ್ನಲ್ಲಿ ಮಾಡಿದ ಪೋಸ್ಟ್ಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ದೆಹಲಿ ಹೈಕೋರ್ಟಿನ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದು, ಅವರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ.
ದೆಹಲಿ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಹಾಗೂ ಪ್ರಸಕ್ತ ಒಡಿಶಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಮುರಳೀಧರ್ ಅವರ ವಿರುದ್ಧದ ಪೋಸ್ಟ್ ಒಂದನ್ನು ಅಗ್ನಿಹೋತ್ರಿ 2018 ರಲ್ಲಿ ರಿಟ್ವೀಟ್ ಮಾಡಿದ್ದರು.
ಇನ್ನು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಖ ಅವರ ಗೃಹ ಬಂಧನ ಮತ್ತು ಟ್ರಾನ್ಸಿಟ್ ರಿಮಾಂಡ್ ಆದೇಶವನ್ನು ರದ್ದುಪಡಿಸಿ ಜಸ್ಟಿಸ್ ಮುರಳೀಧರ್ ಹೊರಡಿಸಿದ್ದ ಆದೇಶದ ಕುರಿತಾದ ಟ್ವೀಟ್ ಅದಾಗಿತ್ತು ಎನ್ನಲಾಗಿದೆ.