ನೋಯ್ಡಾ, ಏ 10 (DaijiworldNews/HR): ಎರಡು ವರ್ಷದ ಬಾಲಕಿಯ ನಾಪತ್ತೆಯಾಗಿದ್ದು, ಇದೀಗ ಆಕೆಯ ಶವ ನೆರೆಮನೆಯ ಬ್ಯಾಗಿನಲ್ಲಿ ಪತ್ತೆಯಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 7 ರಂದು ಸೂರಜ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ಲಾ ಗ್ರಾಮದ ಬಾಡಿಗೆ ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದು, ಅದಾದ ಎರಡು ದಿನಗಳ ನಂತರ ಶವ ಪತ್ತೆಯಾಗಿದೆ.
ಇನ್ನು ಏಪ್ರಿಲ್ 8 ರಂದು ಬಾಲಕಿಯ ತಂದೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು ಮತ್ತು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅವರ ಪತ್ನಿ ಕೂಡ ಮಾರುಕಟ್ಟೆಗೆ ತೆರಳಿದ್ದರು. ಅಲ್ಲಿಂದ ಮನೆಗೆ ಹಿಂತಿರುಗಿದಾಗ ಅವರ ಎರಡು ವರ್ಷದ ಮಗಳು ಕಾಣೆಯಾಗಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 363ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ಭಾನುವಾರ ಅದೇ ಕಟ್ಟಡದ ಮನೆಯೊಂದರಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಈ ವೇಳೆ ಹುಡುಕಾಟ ಮಾಡುವಾಗ ಮೃತದೇಹ ಪತ್ತೆಯಾಗಿದೆ.
ಇನ್ನು ಮಗುವಿನ ಮರಣೋತ್ತರ ಪರೀಕ್ಷೆಯು ಆಕೆಯನ್ನು ಉಸಿರುಗಟ್ಟಿ ಸಾಯಿಸಲಾಗಿದೆ ಎಂದು ತಿಳಿದು ಬಂದಿರುವುದಾಗಿ ಎಸಿಪಿ ಸುಮಿತ್ ಶುಕ್ಲಾ ತಿಳಿಸಿದ್ದಾರೆ.