ಮಹಾರಾಷ್ಟ್ರ, ಏ 10 (DaijiworldNews/HR): ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರ ತಾಲೂಕಿನ ಪರಾಸ್ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಬೃಹತ್ ಮರಬಿದ್ದು 7 ಮಂದಿ ಮೃತಪಟ್ಟು, 5 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಳೆ ಜೋರಾಗಿ ಬರುತ್ತಿದ್ದ ಕಾರಣ ತಗಡಿನ ಶೆಡ್ ನ ಕೆಳಗೆ 35 -40 ಜನರು ನಿಂತಿದ್ದರು. ಈ ವೇಳೆ ಮಳೆಯೊಟ್ಟಿಗೆ ಜೋರಾದ ಗಾಳಿಯೂ ಬೀಸಿದ ಪರಿಣಾಮ ಶೆಡ್ ನ ಪಕ್ಕದಲ್ಲಿದ್ದ ಬೃಹತ್ ಬೇವಿನ ಮರ ಶೆಡ್ ನ ಮೇಲೆ ಬಿದ್ದಿದೆ.
ಇನ್ನು ತಕ್ಷಣ ಭಕ್ತರು ಅತ್ತಿತ್ತ ಓಡಿದ್ದಾರೆ. ಆದರೆ ಇದರಲ್ಲಿ 7 ಮಂದಿ ಸಾವನ್ನಪ್ಪಿದ್ದು, 5 ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ತುಂಡಾಗಿ ಬಿದ್ದ ಮರವನ್ನು ಮತ್ತು ಕುಸಿದ ಶೆಡ್ ಅನ್ನು ಮೇಲೆತ್ತಲು ಜೆಸಿಬಿ ಯಂತ್ರಗಳನ್ನು ತಂದು ಮೃತದೇಹ ಹಾಗೂ ಗಾಯಾಳುಗಳನ್ನು ಹೊರ ತೆಗೆಯಲಾಗಿದೆ.