ಬೆಂಗಳೂರು, ಏ.07 (DaijiworldNews/SM): ಗುಜರಾತಿನ ಅಮುಲ್ ದಾಳಿ ಹಿಂದೆ ರಾಜ್ಯದ ಸಹಕಾರ ವ್ಯವಸ್ಥೆ, ಸಣ್ಣ ರೈತರ ಬದುಕನ್ನು ನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ನಂದಿನಿಯಾಗಲಿ, ಅಮೂಲ್ ಆಗಲಿ ಎರಡೂ ಕೋ ಆಪರೇಟಿವ್ ತತ್ವದಲ್ಲಿ ಹುಟ್ಟಿದವು ಹಾಗೂ ಅದೇ ತತ್ವದಲ್ಲಿ ಕಾರ್ಯಚರಿಸುತ್ತವೆಯೇ ಹೊರತು ಕಾರ್ಪೊರೇಟ್ ತತ್ವದಲ್ಲಿ ಅಲ್ಲ. ಆದರೆ ಕಾರ್ಪೊರೇಟ್ ಕಂಪೆನಿಯ ರೀತಿ ಅಮೂಲ್ ದಾಳಿ ಮಾಡುತ್ತಿರುವ ಹಿಂದೆ ಕರ್ನಾಟಕದ ಕೋಅಪರೇಟಿವ್ ವ್ಯವಸ್ಥೆಯನ್ನ, ಸಣ್ಣ ರೈತರ ಬದುಕನ್ನು ನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ "ನಂದಿನಿ" ಎಂದರೆ ಬರೀ ಹಾಲಲ್ಲ, ರಾಜ್ಯದ ರೈತರ ಬೆವರು, ಬದುಕು, ಭವಿಷ್ಯ. ನಂದಿನಿಯನ್ನು ನಂಬಿ ಬದುಕುವ ಕೋಟ್ಯಂತರ ರೈತರ ಬೆನ್ನಿಗೆ ಚೂರಿ ಹಾಕಲು ಈ ರಾಜ್ಯದ ಮುಖ್ಯಮಂತ್ರಿ ಹೊರಟಿದ್ದಾರೆ. ಬೊಮ್ಮಾಯಿ ಅವರೇ, ನೀವೆಷ್ಟೇ ಗುಲಾಮಗಿರಿ ಮಾಡಿದರೂ ನಿಮಗೆ ಮಣೆ ಹಾಕುವುದಿಲ್ಲ.ರಾಜ್ಯದ ರೈತರ ಹಿತ ಬಲಿ ಕೊಡುತ್ತಿರುವುದು ಅಕ್ಷಮ್ಯ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.