ಚಿತ್ರದುರ್ಗ, ಏ 09 (DaijiworldNews/HR): ಕನ್ನಡಕ, ಟೋಪಿ, ಸಫಾರಿ ಹಾಕಿಕೊಂಡಿದ್ದಾರೆ. ಸುಪಾರಿನೋ ಸಫಾರಿನೋ, ಪಾಪ ಹುಲಿ ಬೇಟೆಯಾಡಲು ಹೋಗಿದ್ದಾರೆ ಎಂದು ಮೋದಿ ವೇಷಭೂಷಣದ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಿ, ಚಿರತೆ ದಾಳಿಗೆ ಬಲಿಯಾದ ಕುಟುಂಬದ ಭೇಟಿ ಇಲ್ಲ. ಪ್ರಧಾನಿ ಮೋದಿ ಹುಲಿ ಸಂರಕ್ಷಣೆ ಮಾಡಲು ಬಂದಿದ್ದಾರೆ. ವನ್ಯ ಜೀವಿಗಳನ್ನೂ ನಾವು ಕಾಪಾಡಬೇಕು. ವನ್ಯಜೀವಿಗಳ ಮೇಲಿನ ಕಾಳಜಿ ಜನರ ಮೇಲೆಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇನ್ನು ವನ್ಯಜೀವಿ ದಾಳಿಗೊಳಗಾದವರ ಬಗ್ಗೆ ಸಿಎಂ, ಪಿಎಂ ಅನುಕಂಪದ ಮಾತಾಡಿಲ್ಲ. ಉತ್ತರ ಕರ್ನಾಟಕದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ. ಈ ಬಗ್ಗೆ ಈವರೆಗೆ ಪ್ರಧಾನಿ ಚರ್ಚೆ ಮಾಡಿಲ್ಲ.ಹುಲಿ ಸಂರಕ್ಷಣೆ, ಅಭಯಾರಣ್ಯ ವಿಸ್ತರಣೆ ಬಗ್ಗೆ ಹೇಳ್ತಾರೆ ಎಂದರು.
ಪಟ್ಟಣವೇ ನೋಡದೆ ಪ್ರಾಣಿಗಳ ಜತೆಯೇ ಅನೇಕರ ಬದುಕು ಇದೆ. ಅಂಥವರನ್ನ ಒಕ್ಕಲೆಬ್ಬಿಸಿದರೆ ಅವರೆಲ್ಲ ಎಲ್ಲಿಗೆ ಹೋಗಬೇಕು. ವನ್ಯಜೀವಿ ಸಂರಕ್ಷಕ ಎಂಬಂತೆ ಮಾನವ ಸಂರಕ್ಷಕ ಆಗಬೇಕಲ್ಲವೇ? ಧರ್ಮದ ಹೆಸರಲ್ಲಿ ಅಮಾಯಕರ ಬಲಿ ತೆಗೆದುಕೊಂಡಿದ್ದಾರೆ. ಈಗ ರಾಜ್ಯ, ದೇಶ ಕಟ್ಟುತ್ತೇವೆ ಅನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.