ಬೆಂಗಳೂರು, ಏ 9 (DaijiworldNews/MS): ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ದುರಾಡಳಿತವಿದ್ದು ಪರಿಣಾಮ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ಸಮಸ್ಯೆಗಳಿಗೆ ಪರಿಹಾರ ನೀಡಲು ಕೆಲವು ಕಾರ್ಯಕ್ರಮ ರೂಪಿಸಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ, ಮನೆಯೊಡತಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಾನು ಮೊದಲ ಬಾರಿ ಮತ ಹಾಕುತ್ತಿರುವ ಯುವ ಮತದಾರರು ಜತೆ ಚರ್ಚೆ ಮಾಡಿದ್ದು, ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ವಿಶ್ವ ವಿಖ್ಯಾತಿ ಪಡೆದಿದ್ದ ಬೆಂಗಳೂರು ವಾಸ ಯೋಗ್ಯ ನಗರಗಳ ಪಟ್ಟಿಯಲ್ಲಿ ಕುಸಿತ ಕಂಡಿದೆ. ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗೆ ಅನೇಕ ಸಮಸ್ಯೆಗಳು ರಾಜ್ಯ ಹಾಗೂ ಬೆಂಗಳೂರು ನಗರವನ್ನು ಕಾಡುತ್ತಿವೆ. ಸರ್ಕಾರದ ಆಡಳಿತದಲ್ಲಿ ಬದ್ಧತೆ ಇಲ್ಲವಾಗಿದ್ದು, ದಕ್ಷ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರ ಸಮರ್ಥವಾಗಿದೆ. ಇನ್ನು ಜನರು 40% ಕಮಿಷನ್ ಸರ್ಕಾರಿದಿಂದ ಬೇಸತ್ತಿದ್ದು, ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಯಲು 100% ಬದ್ಧತೆ ನೀಡಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಮುಖ್ಯಮಂತ್ರಿ ಆಗುವರೇ ಎಂದು ಕೇಳಿದ ಪ್ರಶ್ನೆಗೆ, ‘ಖರ್ಗೆ ಅವರು ನನ್ನ ಗೌರವಯುತ ಅಧ್ಯಕ್ಷರು. ನಾವೆಲ್ಲರೂ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಇದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ಮೊದಲು ಚುನಾವಣೆ ಗೆಲ್ಲಬೇಕು, ನಂತರ ಈ ವಿಚಾರವಾಗಿ ಚರ್ಚೆ ಮಾಡಬಹುದು’ ಎಂದು ತಿಳಿಸಿದ್ದಾರೆ.
ಎಂ.ವಿ ಕೃಷ್ಣಪ್ಪ ಅವರು ಬೆಂಗಳೂರು ಡೇರಿ ಸ್ಥಾಪಿಸಿದ್ದು, ಕರ್ನಾಟಕ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಕರ್ನಾಟಕದ ಬ್ರ್ಯಾಂಡ್ ಗಳನ್ನು ಕಳೆದುಕೊಂಡಿದೆ. ಸ್ಟೋಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕ್, ಸಿಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಗಳನ್ನು ವಿಲೀನದ ಹೆಸರಲ್ಲಿ ನಾಶ ಮಾಡಿದ್ದಾರೆ. ಅಮಿತ್ ಶಾ ಅವರು ಸಹಕಾರ ಇಲಾಖೆ ಸಚಿವರಾಗಿರುವುದೇ ಸಹಕಾರ ಕ್ಷೇತ್ರದಲ್ಲಿ ಈ ರೀತಿ ಗೊಂದಲ ಸೃಷ್ಟಿಸಲು. ಬಿಜೆಪಿ ಆಡಳಿತದಲ್ಲಿ ನಿಂದಿನಿ ಹಾಗೂ ಕೆಎಂಎಫ್ ಅಪಾಯಕ್ಕೆ ಸಿಲುಕಿದ್ದು, ಕರ್ನಾಟಕದಲ್ಲಿ ಪ್ರತಿಯೊಬ್ಬರೂ ನಂದಿನಿ ರಕ್ಷಣೆಗೆ ಮುಂದಾಗಬೇಕು’ ಎಂದು ತಿಳಿಸಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಸೇರ್ಪಡೆ ವಿಚಾರವಾಗಿ ಕೇಳಿದಾಗ, ‘ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಲ್ಲಿ 5 ಶಾಸಕರು, 2 ಎಂಎಲ್ ಸಿ, 11 ಮಾಜಿ ಶಾಸಕರು, 4 ಮಾಜಿ ಎಂಎಲ್ ಸಿ, 1 ಮಾಜಿ ಸಂಸದರು ಕಾಂಗ್ರೆಸ್ ಪಕ್ಷ ಸೇರಿದ್ದು, ಬೇರೆ ಪಕ್ಷದ ನಾಯಕರು ಕೂಡ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಲಿದೆ ಎಂದು ನಂಬಿರುವುದಕ್ಕೆ ಸಾಕ್ಷಿ. ರಾಜಕೀಯ ನಾಯಕರು ತಮ್ಮ ಸಿದ್ದಾಂತಕ್ಕೆ ವಿರೋಧವಾಗಿ ಪಕ್ಷಾಂತರ ಮಾಡುವುದು ಬೇಸರದ ವಿಚಾರ. ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಪಕ್ಷ ಸೇರ್ಪಡೆಯಾದರೆ ಉತ್ತಮ. ರಾಜಕೀಯ ಎಂದರೆ ಸಿದ್ಧಾಂತ, ಮೌಲ್ಯ, ತತ್ವಗಳ ಆಧಾರದ ಮೇಲೆ ನಿಂತಿವೆ’ ಎಂದು ತಿಳಿಸಿದ್ದಾರೆ.