ಮೈಸೂರು, ಏ 9 (DaijiworldNews/MS): ಪ್ರಾಜೆಕ್ಟ್ ಟೈಗರ್ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ದೇಶದ ಪ್ರಸಕ್ತ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಮೈಸೂರಿನ ಕರಾಮುವಿ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ 2022ರ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಪ್ರಧಾನಿ ಭಾರತ ದೇಶವು ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುತ್ತಿರುವ ವೇಳೆಯಲ್ಲೇ ಭಾರತ ದೇಶದಲ್ಲಿ ವಿಶ್ವದ ಒಟ್ಟು ಹುಲಿಗಳ ಸಂತತಿ ಪೈಕಿ ಶೇ. 75ರಷ್ಟು ಹುಲಿಗಳಿವೆ. ವಿಶ್ವದಲ್ಲೇ ಅತಿ ದೊಡ್ಡ ಹುಲಿ ಸಂತತಿ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ.
2022ರ ವರದಿಯಂತೆ ಭಾರತವು ಈಗ 3,167 ಹುಲಿಗಳನ್ನು ಹೊಂದಿದೆ. 2018ರಲ್ಲಿ ಈ ಹಿಂದಿನ ವರದಿ ರಿಲೀಸ್ ಮಾಡಿದಾಗ ದೇಶದಲ್ಲಿ 2,967 ಹುಲಿ ಇತ್ತು. ಈ ನಡುವೆ ಭಾರತದಲ್ಲಿ ಹುಲಿಗಳ ಸಂಖ್ಯೆಯು ಈ ಹಿಂದೆ ಅಂದರೆ 2014, 2010 ಮತ್ತು 2006ರಲ್ಲಿ ಕ್ರಮವಾಗಿ 2,226, 1,706 ಮತ್ತು 1,411 ಇತ್ತು ಎಂದು ಅಂದಾಜಿಸಲಾಗಿದೆ.