ನವದೆಹಲಿ, ಏ 09 (DaijiworldNews/HR): ಬಂಡಿಪುರ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಕಾಂಗ್ರೆಸ್ ಸರ್ಕಾರ ಪರಿಚಯಿಸಿದ್ದು, ಮೋದಿಯವರೇ ರಾಷ್ಟ್ರೀಯ ಸಂಪತ್ತನ್ನು ಉದ್ಯಮಿ ಗೌತಮ್ ಅದಾನಿ ಅವರಿಗೆ ಮಾರಾಟ ಮಾಡಬೇಡಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಹುಲಿ ಯೋಜನೆಯ 50ನೇ ವರ್ಷದ ಆಚರಣೆ ಕಾರ್ಯಕ್ರಮದ ನಿಮಿತ್ತ ಬಂಡಿಪುರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 50 ವರ್ಷಗಳ ಹಿಂದೆ ಬಂಡಿಪುರದಲ್ಲಿ ಆರಂಭಿಸಿದ ಹುಲಿ ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ಸಂಪೂರ್ಣ ಶ್ರೇಯಸ್ಸು ಪಡೆದುಕೊಳ್ಳಲಿದ್ದಾರೆ. ಅವರು ಅದ್ಭುತ ವೀಕ್ಷಣೆಯ ಅನುಭವ ಪಡೆದುಕೊಳ್ಳಲಿದ್ದಾರೆ. ಆದರೆ ಪರಿಸರ, ಅರಣ್ಯಗಳು, ವನ್ಯಜೀವಿಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಜೀವಿಸುತ್ತಿರುವ ಮೂಲನಿವಾಸಿ ಜನರ ರಕ್ಷಣೆಗಾಗಿ ಮಾಡಿರುವ ಎಲ್ಲ ಕಾನೂನುಗಳನ್ನು ನಾಶಪಡಿಸುವ ಮೂಲಕ ಅವರು ಮತ್ತಷ್ಟು ತಮಾಷೆ ಮಾಡುತ್ತಿದ್ದಾರೆ ಎಂದಿದೆ.
ಇನ್ನು 70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವ ನರೇಂದ್ರ ಮೋದಿ ಅವರೇ, ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ. ಅದರ ಪರಿಣಾಮವೇ ಇಂದು ಹುಲಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ತಮ್ಮಲ್ಲಿ ವಿಶೇಷ ಮನವಿ - ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದಿದೆ.